
ಒರಿಸ್ಸಾ : ಭೀಕರ ರೈಲು ದುರಂತ – ಏರುತ್ತಿದೆ ಸಾವಿನ ಸಂಖ್ಯೆ!
900 ಪ್ರಯಾಣಿಕರಿಗೆ ಗಾಯ : ರಕ್ಷಣಾ ಕಾರ್ಯಾಚರಣೆ ಅಂತ್ಯ
ಬಾಲಸೋರ್ (ಒರಿಸ್ಸಾ): ದೇಶದ ರೈಲ್ವೆ ಇತಿಹಾಸದಲ್ಲಿಯೇ ಭೀಕರ ಅಪಘಾತಗಳಲ್ಲಿ ಒಂದಾದ, ಒಡಿಶಾ ರಾಜ್ಯದ ಬಾಲಸೋರ್ ನ ಬಹನಾಗಾ ಬಜಾರ್ ರೈಲ್ವೆ ನಿಲ್ದಾಣದಲ್ಲಿ ಜೂ. 2 ರ ರಾತ್ರಿ ನಡೆದ ಮೂರು ರೈಲುಗಳ ಅವಘಡ, ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ!

ಈ ಘನಘೋರ ದುರಂತದಲ್ಲಿ ಇಲ್ಲಿಯವರೆಗೂ 261 ಕ್ಕೂ ಅಧಿಕ ಪ್ರಯಾಣಿಕರು ಮೃತಪಟ್ಟಿರುವ ವರದಿಗಳು ಬಂದಿವೆ. ಜೊತೆಗೆ ಸುಮಾರು 900 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಸಾವು-ನೋವಿನ ಅಧಿಕೃತ ವರದಿಗಳು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
ಗಾಯಾಳುಗಳನ್ನು ಬಾಲಸೋರ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ಪ್ರಯಾಣಿಕರ ಸ್ಥಿತಿ ಗಂಭೀರ ಸ್ವರೂಪದಲ್ಲಿದೆ. ಮತ್ತೊಂದೆಡೆ, ಅವಘಡ ಸಂಭವಿಸಿದ ಸ್ಥಳದಲ್ಲಿ ನಡೆಸಲಾಗುತ್ತಿದ್ದ ರಕ್ಷಣಾ ಕಾರ್ಯಾಚರಣೆ ಅಂತ್ಯಗೊಂಡಿದೆ. ವಿವಿಧ ಘಟಕಗಳ ನೂರಾರು ರಕ್ಷಣಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಭಾರೀ ದುರಂತ: ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ಮತ್ತು ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ಪ್ರಯಾಣಿಕ ರೈಲುಗಳು ಹಾಗೂ ಗೂಡ್ಸ್ ರೈಲನ್ನು ಒಳಗೊಂಡಂತೆ ಮೂರು ರೈಲುಗಳ ನಡುವೆ ನಡೆದ ಅಪಘಾತವಿದಾಗಿದೆ.
ಘಟನಾ ಸ್ಥಳಕ್ಕೆ ಕೇಂದ್ರ ರೈಲ್ವೆ ಸಚಿವರು ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಘಟನೆಯ ತನಿಖೆಗೆ ಆದೇಶ ಹೊರಡಿಸಿದ್ದಾರೆ.
ಭೀಕರ ಅವಘಡದ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದಾರೆ. ಹಾಗೆಯೇ ಅಪಘಾತ ನಡೆದ ಸ್ಥಳ ಹಾಗೂ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಕರ್ನಾಟಕದಿಂದ ಒರಿಸ್ಸಾಕ್ಕೆ ತೆರಳಿದ ಸಚಿವರ ನೇತೃತ್ವದ ತಂಡ
ಒರಿಸ್ಸಾ ಬಾಲಸೋರ್ ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ, ಕರ್ನಾಟಕದ ರೈಲ್ವೆ ಪ್ರಯಾಣಿಕರಿಗೆ ನೆರವಾಗಲು ರಾಜ್ಯದಿಂದ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ನಿಯೋಗವೊಂದನ್ನು ಒರಿಸ್ಸಾ ರಾಜ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳುಹಿಸಿದ್ದಾರೆ.

‘ಒರಿಸ್ಸಾದ ಬಾಲಸೋರ್ ನಲ್ಲಿ ಸಂಭವಿಸಿದ ರೈಲು ದುರಂತದ ಹಿನ್ನೆಲೆಯಲ್ಲಿ, ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸುವಂತೆ ಹಾಗೂ ಅವರಿಗೆ ಅಗತ್ಯ ನೆರವನ್ನು ನೀಡುವಂತೆ ಸಚಿವ ಸಂತೋಷ್ ಲಾಡ್ ಅವರಿಗೆ ಸೂಚಿಸಿರುವುದಾಗಿ’ ಸಿಎಂ ಸಿದ್ದರಾಮಯ್ಯರವರು ತಿಳಿಸಿದ್ದಾರೆ.
‘ಘಟನೆಯಲ್ಲಿ ಗಾಯಗೊಂಡ ಅಥವಾ ಇತರೆ ಯಾವುದೇ ಸಮಸ್ಯೆ ಎದುರಿಸುತ್ತಿರುವ ಕನ್ನಡಿಗರ ರಕ್ಷಣೆಗೆ ನಾವು ಬದ್ಧರಿದ್ದೇವೆ. ಪ್ರತಿಯೊಬ್ಬ ಕನ್ನಡಿಗನನ್ನು ನಾವು ಸುರಕ್ಷಿತವಾಗಿ ನಾಡಿಗೆ ಕರೆ ತರುತ್ತೇವೆ’ ಎಂದು ಟ್ವಿಟರ್ ಸಂದೇಶದಲ್ಲಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.