
ಮಹಿಳಾ ಕೇಂದ್ರ ಕಾರಾಗೃಹದಲ್ಲಿ ಪೊಲೀಸರಿಂದ ದಿಢೀರ್ ತಪಾಸಣೆ : ಯಾವುದೇ ನಿಷೇಧಿತ ವಸ್ತುಗಳು ಸಿಕ್ಕಿಲ್ಲ : ಜೈಲ್ ಅಧೀಕ್ಷಕರ ಮಾಹಿತಿ
ಶಿವಮೊಗ್ಗ, ಜೂ. 3: ಶಿವಮೊಗ್ಗ ನಗರದ ಹೊರವಲಯ ಸೋಗಾನೆ ಕೇಂದ್ರ ಕಾರಾಗೃಹದಲ್ಲಿ, ಇತ್ತೀಚೆಗಷ್ಟೆ ಪೊಲೀಸರು ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದ್ದರು. ಇದರ ಬೆನ್ನಲ್ಲೇ ಇದೀಗ, ಜೈಲ್ ನ ಮಹಿಳಾ ಬಂಧೀಖಾನೆಯಲ್ಲಿ ಶನಿವಾರ ಪೊಲೀಸರು ತಪಾಸಣೆ ನಡೆಸಿದ ಘಟನೆ ನಡೆದಿದೆ.

ಐಪಿಎಸ್ ಅಧಿಕಾರಿ ಬಿಂದುಮಣಿ ನೇತೃತ್ವದಲ್ಲಿ ತಪಾಸಣಾ ಕಾರ್ಯ ನಡೆದಿದೆ. ಕಾರಾಗೃಹದಲ್ಲಿನ ಪ್ರತಿಯೊಂದು ಬ್ಯಾರಕ್ ನ್ನು ತಂಡ ಶೋಧ ನಡೆಸಿದೆ. ಈ ವೇಳೆ ಪೊಲೀಸರಿಗೆ ಯಾವುದೇ ನಿಷೇಧಿತ ವಸ್ತುಗಳು ದೊರಕಿಲ್ಲ ಎಂದು ಮಹಿಳಾ ಕೇಂದ್ರ ಕಾರಾಗೃಹದ ಅಧೀಕ್ಷಕಿ ಹೇಮಾವತಿ ಜಿ ಅವರು ತಿಳಿಸಿದ್ದಾರೆ.
ತಪಾಸಣಾ ತಂಡದಲ್ಲಿ ಓರ್ವ ಮಹಿಳಾ ಹೆಡ್ ಕಾನ್ಸ್’ಟೇಬಲ್, 8 ಕಾನ್ಸ್’ಟೇಬಲ್, 5 ಪುರುಷ ಕಾನ್ಸ್’ಟೇಬಲ್, ಶ್ವಾನ ದಳ ಭಾಗಿಯಾಗಿತ್ತು. ಇದೇ ವೇಳೆ ತಪಾಸಣಾ ಯಂತ್ರದ ಮೂಲಕವೂ ಶೋಧ ನಡೆಸಲಾಗಿದೆ ಎಂದು ಕಾರಾಗೃಹದ ಅಧೀಕ್ಷಕರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಕುತೂಹಲ ಮೂಡಿಸಿದ ಜೈಲ್ ಅಧೀಕ್ಷಕರ ಪ್ರಕಟಣೆ..!
ಮಹಿಳಾ ಬಂಧೀಖಾನೆಯಲ್ಲಿ ಶ್ವಾನ ದಳ, ತಪಾಸಣಾ ಯಂತ್ರಗಳೊಂದಿಗೆ ಪೊಲೀಸರು ತಪಾಸಣೆ ನಡೆಸಿದ್ದು ಹಾಗೂ ಈ ಕುರಿತಂತೆ ಕಾರಾಗೃಹ ಅಧೀಕ್ಷಕರು ಪತ್ರಿಕಾ ಪ್ರಕಟಣೆ ನೀಡಿರುವುದು ಕುತೂಹಲ ಹಾಗೂ ನಾನಾ ರೀತಿಯ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ. ಸರ್ವೇಸಾಮಾನ್ಯವಾಗಿ ಕಾರಾಗೃಹದಲ್ಲಿ ಪೊಲೀಸರು ನಡೆಸುವ ತಪಾಸಣೆ ಕುರಿತಂತೆ, ಜೈಲ್ ಅಧೀಕ್ಷಕರು ಪ್ರಕಟಣೆ ನೀಡುವುದಿಲ್ಲ. ಪೊಲೀಸ್ ಇಲಾಖೆಯೇ ಪತ್ರಿಕಾ ಪ್ರಕಟಣೆ ನೀಡುತ್ತದೆ.