
ಕಾನೂನುಬಾಹಿರವಾಗಿ ಮದ್ಯ ಮಾರಾಟ ಮಾಡುವವರ ಬಗ್ಗೆ ಮಾಹಿತಿ ನೀಡಲು ಎಸ್ಪಿ ಮನವಿ
ಆಗುಂಬೆ (ತೀರ್ಥಹಳ್ಳಿ), ಜೂ. 4: ‘ಹಳ್ಳಿಗಳಲ್ಲಿ ಕಾನೂನುಬಾಹಿರವಾಗಿ ಮದ್ಯ ಮಾರಾಟ ಮಾಡುವವರ ಬಗ್ಗೆ ಪೊಲೀಸ್ ಠಾಣೆ ಅಥವಾ ಬೀಟ್ ಸಿಬ್ಬಂದಿಗೆ ಮಾಹಿತಿ ನೀಡುವಂತೆ’ ನಾಗರೀಕರಿಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮನವಿ ಮಾಡಿದ್ದಾರೆ.
ಭಾನುವಾರ ತೀರ್ಥಹಳ್ಳಿ ತಾಲೂಕು ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಕೈಮರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಾಗರೀಕರು ನೀಡುವ ಮಾಹಿತಿಯಿಂದ, ಅಕ್ರಮ ಮದ್ಯ ಮಾರಾಟಗಾರರ ವಿರುದ್ದ ಕ್ರಮ ಜರುಗಿಸಲು ಹಾಗೂ ಮದ್ಯ ಮಾರಾಟ ತಡೆಗಟ್ಟಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಗ್ರಾಮದ ಎಲ್ಲ ವರ್ಗದವರನ್ನೊಳಗೊಂಡ 50 ಜನರ ಬೀಟ್ ಸಮಿತಿ ರಚಿಸಲಾಗುವುದು. ನಿಯಮಿತವಾಗಿ ಈ ಸಮಿತಿಯ ಸಭೆ ನಡೆಯಲಿದೆ. ಗ್ರಾಮಸ್ಥರ ಕುಂದುಕೊರತೆ ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು.
ಜೊತೆಗೆ ಗ್ರಾಮಗಳಲ್ಲಿ ಆಯ್ದ ಯುವಕರನ್ನೊಳಗೊಂಡ ಯುವ ಪಡೆ ರಚಿಸಲಾಗುವುದು. ಈ ಪಡೆಯು ಬೀಟ್ ಸಿಬ್ಬಂದಿಗಳೊಂದಿಗೆ ಗಸ್ತು ಕಾರ್ಯದಲ್ಲಿ ಭಾಗಿಯಾಗಲಿದೆ. ಜೊತೆಗೆ ಅಕ್ರಮ ಚಟುವಟಿಕೆಗಳ ಬಗ್ಗೆ ನಾಗರೀಕರಿಗೆ ಮಾಹಿತಿ ನೀಡಲಿದೆ ಎಂದು ತಿಳಿಸಿದರು.
ಅಗತ್ಯ ಮತ್ತು ತುರ್ತು ಸಂದರ್ಭದಲ್ಲಿ ಇಆರ್’ಎಸ್ಎಸ್-112 ಸಹಾಯವಾಣಿಗೆ ಕರೆ ಮಾಡಿ ಪೊಲೀಸ್ ಸಹಾಯ ಪಡೆದುಕೊಳ್ಳಬಹುದಾಗಿದೆ ಎಂದರು.
ಕೈಮರದ ರಸ್ತೆಯಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎನ್.ಹೆಚ್.ಎ.ಐ ಜೊತೆ ಸಮಾಲೋಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಸ್ಪಿ ಅವರು ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಸಭೆಯಲ್ಲಿ ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತರ, ಇನ್ಸ್’ಪೆಕ್ಟರ್ ಪ್ರವೀಣ್ ನೀಲಮ್ಮನವರ್, ಸಬ್ ಇನ್ಸ್’ಪೆಕ್ಟರ್ ಶಿವಕುಮಾರ್ ಸೇರಿದಂತೆ ಮೊದಲಾದವರಿದ್ದರು.