
ಬಾರ್ ಕ್ಯಾಷಿಯರ್ ಹತ್ಯೆ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು..!
*ಕ್ರಿಮಿನಲ್ಸ್ ಗಳಿಗೆ ಪೊಲೀಸರ ಖಡಕ್ ವಾರ್ನಿಂಗ್!
*ಪೊಲೀಸರ ಎದುರಿನಲ್ಲಿಯೇ ಚೂರಿಯಿಂದ ದಾಳಿ ನಡೆಸಿದ್ದ ಹಂತಕರು!!
ಶಿವಮೊಗ್ಗ, ಜೂ. 5: ಶಿವಮೊಗ್ಗ ತಾಲೂಕು ಆಯನೂರು ಬಾರ್ ಕ್ಯಾಷಿಯರ್ ನನ್ನು ಪೊಲೀಸರ ಸಮ್ಮುಖದಲ್ಲಿಯೇ ಹತ್ಯೆ ನಡೆಸಿ ಪರಾರಿಯಾಗಿದ್ದ ಆರೋಪಿಗಳಲ್ಲಿ, ಓರ್ವನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ ಸೋಮವಾರ ನಡೆದಿದೆ.
ಸತೀಶ್ ಗುಂಡೇಟಿಗೆ ತುತ್ತಾದ ಆರೋಪಿ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಹತ್ಯೆ ನಡೆಸಿದ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನಕ್ಕೆ ಪೊಲೀಸರು ತೆರೆಳಿದ್ದ ವೇಳೆ, ಆಪಾದಿತ ಸತೀಶ್ ಪೊಲೀಸರ ಮೇಲೆಯೇ ಚಾಕುವಿನಿಂದ ದಾಳಿ ನಡೆಸಲು ಮುಂದಾಗಿದ್ದ. ಈ ವೇಳೆ ಆತ್ಮ ರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡಿಕ್ಕಿ ವಶಕ್ಕೆ ಪಡೆದಿದ್ದಾರೆ.
ಹತ್ಯೆ: ಆಯನೂರು ತಾಂಡಾದ ಮೂವರು ಆರೋಪಿಗಳು ಆಯನೂರಿನ ನವರತ್ನ ಬಾರ್ ನಲ್ಲಿ ಕ್ಯಾಷಿಯರ್ ಸಚಿನ್ ಎಂಬ ಯುವಕನನ್ನು ಪೊಲೀಸರ ಸಮ್ಮುಖದಲ್ಲಿಯೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ನಂತರ ಸ್ಥಳದಿಂದ ಪರಾರಿಯಾಗಿದ್ದರು. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.