
ಮುಂಗಾರು ಮಳೆ ಕಣ್ಮರೆ : ಕುಡಿಯುವ ನೀರಿಗೂ ಎದುರಾಗಲಿದೆ ಹಾಹಾಕಾರ – ಕೃಷಿ ಚಟುವಟಿಕೆಯೂ ಏರುಪೇರು!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಜೂ. 8: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತೀತರ ಹವಾಮಾನ ವೈಪರೀತ್ಯದಿಂದ, ಪ್ರಸ್ತುತ ವರ್ಷ ಮುಂಗಾರು ಮಳೆ ವಿಳಂಬವಾಗಿದೆ. ಮಳೆಗಾಲ ಆರಂಭದ ಜೂನ್ ಮಾಹೆಯ ಮೊದಲ ವಾರದಲ್ಲಿಯೂ, ಮಲೆನಾಡು ಭಾಗದಲ್ಲಿ ಬೇಸಿಗೆಯ ಬಿಸಿಲು ಮುಂದುವರಿದಿದೆ. ಇದರಿಂದ ಕೃಷಿ ಚಟುವಟಿಕೆ ಮಾತ್ರವಲ್ಲದೆ, ಕುಡಿಯುವ ನೀರು ಪೂರೈಕೆ ಮೇಲೂ ಗಂಭೀರ ಪರಿಣಾಮ ಬೀರುವ ಆತಂಕ ಎದುರಾಗಿದೆ!
ಈ ಮೊದಲು ಭಾರತೀಯ ಹವಾಮಾನ ಇಲಾಖೆಯು, ಜೂ. 4 ರಿಂದ ಕೇರಳಕ್ಕೆ ನೈರುತ್ಯ ಮಾನ್ಸೂನ್ ಪ್ರವೇಶಿಸಲಿದೆ ಎಂದು ಅಂದಾಜಿಸಿತ್ತು. ಇದೀಗ ಹವಾಮಾನ ವೈಪರೀತ್ಯದಿಂದ ಮುಂಗಾರು ಆಗಮನ ತಡವಾಗಲಿದೆ ಎಂದು ತಿಳಿಸಿದೆ.
ಕೃಷಿ ಏರುಪೇರು: ವರ್ಷಧಾರೆ ಪ್ರಾರಂಭವಾಗದಿರುವುದರ ನೇರ ಪರಿಣಾಮ, ಜಿಲ್ಲೆಯ ಕೃಷಿ ಚಟುವಟಿಕೆ ಮೇಲೆ ಬೀರಲಾರಂಭಿಸಿದೆ. ಕಳೆದ ಮೇ ತಿಂಗಳಲ್ಲಿ ಆಗಾಗ್ಗೆ ಬಿದ್ದ ಹಿಂಗಾರು ಮಳೆಗೆ, ಹಲವೆಡೆ ರೈತರು ಕೃಷಿ ಭೂಮಿಯನ್ನು ಈಗಾಗಲೇ ಬಿತ್ತನೆಗೆ ಸಜ್ಜುಗೊಳಿಸಿದ್ದಾರೆ.
ಇನ್ನೊಂದೆಡೆ, ವಿಳಂಬವಾಗಿಯಾದರೂ ಉತ್ತಮ ಮಳೆ ನಿರೀಕ್ಷೆಯಲ್ಲಿರುವ ಕೆಲ ರೈತರು ಬಿತ್ತನೆ ಕಾರ್ಯಕ್ಕೆ ಕೃಷಿ ಭೂಮಿಯನ್ನು ಹದಗೊಳಿಸುವ ಕಾರ್ಯದಲ್ಲಿ ತಲ್ಲೀನವಾಗಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ.
ಅಂತರ್ಜಲ ಕುಸಿತ: ಬೇಸಿಗೆ ವೇಳೆ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಹಿಂಗಾರು ಮಳೆಯಾಗಿಲ್ಲ. ವಾಡಿಕೆಗಿಂತ ಕಡಿಮೆ ವರ್ಷಧಾರೆಯಾಗಿದೆ. ಹಾಗೆಯೇ ಬಿಸಿಲ ತಾಪ ಕೂಡ ಹೆಚ್ಚಿತ್ತು. ಈ ಕಾರಣದಿಂದ ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹದ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಹಲವೆಡೆ ಜಲಮೂಲಗಳು ನೀರಿಲ್ಲದೆ ಬರಿದಾಗಿವೆ.
ಅಂತರ್ಜಲ ಮಟ್ಟದಲ್ಲಿಯೂ ಗಂಭೀರ ಸ್ವರೂಪದ ಕುಸಿತ ಕಂಡುಬಂದಿದೆ. ಈಗಾಗಲೇ ವಿವಿಧೆಡೆ ಬೋರ್ ವೆಲ್ – ಬಾವಿಗಳು ಗಳು ನೀರಿಲ್ಲದೆ ಬರಿದಾಗಿವೆ. ಹಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.
ನಿರೀಕ್ಷೆ: ಮುಂದಿನ ಎರಡ್ಮೂರು ದಿನಗಳಲ್ಲಿ ಮುಂಗಾರು ಮಳೆ ಆಗಮನ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದ್ದು, ಜೊತೆಗೆ ಉತ್ತಮ ವರ್ಷಧಾರೆಯಾಗುವ ಸಾಧ್ಯತೆಯನ್ನು ಕೂಡ ವ್ಯಕ್ತಪಡಿಸುತ್ತಿದೆ.
ಶಿವಮೊಗ್ಗ ನಗರದ ಕುಡಿಯುವ ನೀರು ಪೂರೈಕೆ ಮೇಲೆ ಬೀರಲಿದೆ ಪರಿಣಾಮ!
*** ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುವ ಗಾಜನೂರಿನ ತುಂಗಾ ಜಲಾಶಯದ ನೀರಿನ ಸಂಗ್ರಹದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬರಲಾರಂಭಿಸಿದೆ. ಕಳೆದ ಬೇಸಿಗೆ ಅವಧಿಯಲ್ಲಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ಹಾಗೂ ಬಿಸಿಲ ತೀವ್ರತೆ ಹೆಚ್ಚಿದ್ದುದು, ಡ್ಯಾಂ ನೀರಿನ ಸಂಗ್ರಹದಲ್ಲಿ ಭಾರೀ ಪ್ರಮಾಣದ ಕುಸಿತಕ್ಕೆ ಕಾರಣವಾಗಿದೆ. ಇನ್ನೂ ಕೆಲ ದಿನಗಳಲ್ಲಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ, ಡ್ಯಾಂಗೆ ನೀರು ಹರಿದು ಬರದಿದ್ದರೆ ಶಿವಮೊಗ್ಗ ನಗರದ ಕುಡಿಯುವ ನೀರು ಪೂರೈಕೆಯಲ್ಲಿ ತೀವ್ರ ಸ್ವರೂಪದ ವ್ಯತ್ಯಯವಾಗಲಿದೆ. ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಆತಂಕ ಎದುರಾಗಿದೆ.
One thought on “ಮುಂಗಾರು ಮಳೆ ಕಣ್ಮರೆ : ಕುಡಿಯುವ ನೀರಿಗೂ ಎದುರಾಗಲಿದೆ ಹಾಹಾಕಾರ – ಕೃಷಿ ಚಟುವಟಿಕೆಯೂ ಏರುಪೇರು!”
Comments are closed.
ತುಂಗಾ ಅಣೆಕಟ್ಟಿನಲ್ಲಿ ಬೋಟಿಂಗ್ ನಿರ್ಮಿಸಿದ್ದು ಕುಡಿಯುವ ನೀರಿಗೆ ಆಯಿಲ್ ಮಿಕ್ಸ್ ಆಗುತ್ತಿದೆ ಇದನ್ನು ತಪ್ಪಿಸಲು ದಯವಿಟ್ಟು ಜಂಗಲ್ ರೆಸಾರ್ಟ್ ಅವರ ಮೇಲೆ ದೂರನ್ನು ದಾಖಲಿಸಬೇಕಾಗಿ ವಿನಂತಿ