
ಶಿರಾಳಕೊಪ್ಪ ಪೊಲೀಸರ ಕಾರ್ಯಾಚರಣೆ – ಬೈಕ್ ಕಳ್ಳನ ಬಂಧನ : ಮೂರು ಪ್ರಕರಣ ಬೆಳಕಿಗೆ!
ಶಿಕಾರಿಪುರ, ಜೂ. 8: ವಿವಿಧೆಡೆ ಬೈಕ್ ಕಳವು ಮಾಡಿದ್ದ ಆರೋಪದ ಮೇರೆಗೆ, ಓರ್ವನನ್ನು ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಶಿರಾಳಕೊಪ್ಪ ಪಟ್ಟಣದ ನೆಹರು ಕಾಲೋನಿ ನಿವಾಸಿ ಜಿಯಾವುಲ್ಲಾ ಯಾನೆ ಜಿಯಾ (31) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನಿಂದ 1.19 ಲಕ್ಷ ರೂ. ಮೌಲ್ಯದ 3 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿರಾಳಕೊಪ್ಪದ ಬಸ್ ನಿಲ್ದಾಣದ ಬಳಿ ಸ್ಪ್ಲೆಂಡರ್ ಬೈಕ್ ವೊಂದು ಕಳವು ಮಾಡಲಾಗಿತ್ತು. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ವೇಳೆ, ಜಿಯಾವುಲ್ಲಾನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು.
ಆರೋಪಿಯು ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿ, ದಾವಣಗೆರೆ ಜಿಲ್ಲೆಯ ಬಸವನಗರ ಠಾಣಾ ವ್ಯಾಪ್ತಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಬೈಕ್ ಕಳವು ಮಾಡಿದ್ದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಶಿವಾನಂದ ಮದರಕಂಡಿ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ರುದ್ರೇಶ್, ಸಬ್ ಇನ್ಸ್’ಪೆಕ್ಟರ್ ಮಂಜುನಾಥ್ ಕುರಿ ಮತ್ತವರ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿದ್ದಾರೆ.