
ಶಿಕಾರಿಪುರದ ಜಕ್ಕನಹಳ್ಳಿ ಬಳಿ ಭೀಕರ ಅಪಘಾತ : ಇಬ್ಬರು ಸಾವು – 11 ಜನರಿಗೆ ಗಾಯ!
ಶಿಕಾರಿಪುರ, ಜೂ. 9: ಶಿಕಾರಿಪುರ ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ಜೂ. 8 ರ ಗುರುವಾರ ರಾತ್ರಿ ಬೊಲೆರೋ ಸರಕು ಸಾಗಾಣೆ ವಾಹನವೊಂದು ಹಿಂಬದಿಯಿಂದ ಲಗೇಜ್ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ, ಲಗೇಜ್ ಆಟೋದಲ್ಲಿದ್ದ ಇಬ್ಬರು ಮೃತಪಟ್ಟು 11 ಜನ ಗಾಯಗೊಂಡ ಘಟನೆ ನಡೆದಿದೆ.

ತೊಟ್ಟಿಲ ಶಾಸ್ತ್ರ ಮುಗಿಸಿಕೊಂಡು ಬಿದುರುಕೊಪ್ಪದಿಂದ ಲಗೇಜ್ ಆಟೋದಲ್ಲಿ ನಳ್ಳಿನಕೊಪ್ಪ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಜಕ್ಕನಹಳ್ಳಿ ಗ್ರಾಮದ ರಸ್ತೆ ಹಂಪ್ಸ್ ಬಳಿ, ಲಗೇಜ್ ಆಟೋ ಚಾಲಕ ವೇಗ ಕಡಿಮೆ ಮಾಡಿದ ವೇಳೆ, ಹಿಂಬದಿಯಿಂದ ವೇಗವಾಗಿ ಆಗಮಿಸಿದ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ.

ಇದರಿಂದ ಲಗೇಜ್ ಆಟೋದ ಹಿಂಬದಿ ಕಾಲು ಕೆಳಕ್ಕೆ ಬಿಟ್ಟು ಕುಳಿತ್ತಿದ್ದವರು ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದು, ಕೆಲವರ ಕಾಲುಗಳು ತುಂಡಾಗಿವೆ. ತೀವ್ರ ಸ್ವರೂಪದಲ್ಲಿ ಗಾಯಗೊಂಡ ಗಾಯಾಳುಗಳನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತರೆ ಗಾಯಾಳುಗಳಿಗೆ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ಈ ನಡುವೇ ಗುರುವಾರ ರಾತ್ರಿಯೇ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರವರು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಮತ್ತೊಂದೆಡೆ, ಶುಕ್ರವಾರ ಬೆಳಿಗ್ಗೆ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಅವರು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದ್ದಾರೆ.