
ನೋವು ನಿವಾರಕ ‘ಮೆಂಥೋಪ್ಲಸ್’ ಡಬ್ಬಿ ನುಂಗಿ 9 ತಿಂಗಳ ಮಗು ಸಾವು!
ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದಲ್ಲಿ ನಡೆದ ದಾರುಣ ಘಟನೆ
ಕಂಪ್ಲಿ (ಬಳ್ಳಾರಿ): ಮನೆಯೊಳಗೆ ಆಟವಾಡುತ್ತಿದ್ದ 9 ತಿಂಗಳ ಮಗು ಆಕಸ್ಮಿಕವಾಗಿ ನೋವು ನಿವಾರಕ ‘ಮೆಂಥೋಪ್ಲಸ್’ ಚಿಕ್ಕ ಡಬ್ಬಿ ನುಂಗಿದ್ದು, ಅದು ಗಂಟಲಲ್ಲಿ ಸಿಲುಕಿದ ಪರಿಣಾಮ ತೀವ್ರ ಉಸಿರಾಟದ ತೊಂದರೆಯಿಂದ ಮೃತಪಟ್ಟ ದಾರುಣ ಘಟನೆ, ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದಲ್ಲಿ ಜೂ. 9 ರ ಶುಕ್ರವಾರ ನಡೆದಿದೆ.
ಕಂಪ್ಲಿ ಪಟ್ಟಣದ 5 ನೇ ವಾರ್ಡ್ ಇಂದಿರಾನಗರದ ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿಯ ಏಕೈಕ ಪುತ್ರಿ ಪ್ರಿಯದರ್ಶಿನಿ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ.

ಮನೆಯೊಳಗೆ ಆಟವಾಡುತ್ತಿದ್ದ ಮಗು 2 ರೂ. ಮೊತ್ತದ ‘ಮೆಂಥೋಪ್ಲಸ್’ ಚಿಕ್ಕ ಡಬ್ಬಿಯನ್ನು ಬಾಯೊಳಗೆ ಹಾಕಿಕೊಂಡಿದೆ. ಮಗುವಿನ ಅಳು ಗಮನಿಸಿದ ಕುಟುಂಬದವರು ಪರೀಕ್ಷಿಸಿದಾಗ ‘ಮೆಂಥೋಪ್ಲಸ್’ ಡಬ್ಬಿ ಗಂಟಲಲ್ಲಿ ಸಿಲುಕಿರುವುದು ಗೊತ್ತಾಗಿದೆ. ಅದನ್ನು ಹೊರತೆಗೆಯಲು ಯತ್ನಿಸಿದ್ದಾರೆ.
ಮಗುವಿನ ಉಸಿರಾಟದಲ್ಲಿ ಏರುಪೇರು ಕಂಡುಬರಲಾರಂಭಿಸಿದೆ. ತಕ್ಷಣವೇ ಮಗುವನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆಯೇ ಮಗು ಮೃತಪಟ್ಟಿತ್ತು ಎಂದು ಆಸ್ಪತ್ರೆ ವೈದ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿಗೆ 10 ವರ್ಷಗಳ ನಂತರ ಮಗು ಜನಿಸಿತ್ತು. ಪ್ರಿಯದರ್ಶಿನಿ ಎಂದು ಹೆಸರಿಟ್ಟಿದ್ದರು. ಮಗುವಿನ ಸಾವು ಕುಟುಂಬದವರಿಗೆ ಬರ ಸಿಡಿಲು ಬಡಿದಂತಾಗಿದ್ದು, ಆಕ್ರಂದನ ಮುಗಿಲು ಮುಟ್ಟುವಂತೆ ಮಾಡಿದೆ.