
ಮಲೆನಾಡಿನಲ್ಲಿ ವರ್ಷಧಾರೆಯ ಸಿಂಚನ..!
ಶಿವಮೊಗ್ಗ, ಜೂ. 11: ಕಳೆದ ಗುರುವಾರ ಕೇರಳ ರಾಜ್ಯಕ್ಕೆ ಕಾಲಿಟ್ಟಿದ್ದ ಮುಂಗಾರು ಮಳೆ, ಶನಿವಾರ ಕರ್ನಾಟಕ ರಾಜ್ಯ ಪ್ರವೇಶಿಸಿದೆ. ಮುಂದಿನ ಕೆಲ ದಿನಗಳಲ್ಲಿ ರಾಜ್ಯದ ಇತರೆಡೆಯೂ ಮುಂಗಾರು ಮಳೆಯ ಸಿಂಚನವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ನಡುವೆ ಭಾನುವಾರ ಬೆಳಿಗ್ಗೆಯಿಂದ ಶಿವಮೊಗ್ಗ ಜಿಲ್ಲೆಯ ಹಲವೆಡೆ ಮಳೆಯಾಗಲಾರಂಭಿಸಿದೆ. ಮೋಡ ಕವಿದ ವಾತಾವರಣ ನೆಲೆಸಿದೆ. ತಾಪಮಾನದ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.
ಜಿಲ್ಲೆಯ ಹಲವೆಡೆ ಭಾನುವಾರ ಸಾಧಾರಣ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆ ಚುರುಕುಗೊಳ್ಳುವ ಸಾಧ್ಯತೆಗಳಿವೆ. ಜೂನ್ ಪ್ರಾರಂಭದಲ್ಲಿ ಮಳೆ ಕಣ್ಮರೆಯಾಗಿದ್ದರಿಂದ ಕೃಷಿ ಚಟುವಟಿಕೆ ಮೇಲೆ ಪರಿಣಾಮ ಬೀರಿತ್ತು. ಹಲವೆಡೆ ಕುಡಿಯುವ ನೀರಿಗೂ ಹಾಹಾಕಾರ ತಲೆದೋರಿತ್ತು.
ಇದೀಗ ಕ್ರಮೇಣ ಮಳೆಯಾಗಲಾರಂಭಿಸಿರುವುದು ನಾಗರೀಕರಲ್ಲಿ ನಿಟ್ಟುಸಿರ ಭಾವ ಮೂಡಿಸಿದೆ. ಜೊತೆಗೆ ಬೇಸಿಗೆ ಬಿಸಿಲಿಗೆ ಕಾದ ಕಾವಲಿಯಂತಾಗಿದ್ದ ಇಳೆಯು ತಂಪಾಗಲಾರಂಭಿಸಿದೆ.