ಶಿವಮೊಗ್ಗ ತಾಲೂಕಿನ ಹೊಳಲೂರಿನಲ್ಲಿ ಕಂದಾಯ ಸಚಿವರ ಗ್ರಾಮ ವಾಸ್ತವ್ಯ!

ಶಿವಮೊಗ್ಗ, ಜ. 16: ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ಪ್ರಯುಕ್ತ ಶಿವಮೊಗ್ಗ ತಾಲ್ಲೂಕಿನ ಹೊಳಲೂರಿನಲ್ಲಿ ಕಂದಾಯ ಸಚಿವರಾದ ಆರ್.ಅಶೋಕ್ ರವರು ಜ.28 ರಂದು ಗ್ರಾಮ ವಾಸ್ತವ್ಯ ಮಾಡಲಿದ್ದು, ಸಂಬಂಧಿಸಿದ ಎಲ್ಲಾ ತಾಲ್ಲೂಕು ಅಧಿಕಾರಿಗಳು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ತಹಶೀಲ್ದಾರ್ ಡಾ.ನಾಗರಾಜ್ ಸೂಚನೆ ನೀಡಿದ್ದಾರೆ.

ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಕುರಿತು ಪೂರ್ವಭಾವಿಯಾಗಿ ಚರ್ಚಿಸಲು ಇಂದು ತಾಲ್ಲೂಕು ಕಚೇರಿಯಲ್ಲಿ ಕರೆಯಲಾಗಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಜ.28 ರಂದು ತಾಲ್ಲೂಕಿನ ಹೊಳಲೂರು ಗ್ರಾಮದ ಮಾರುತಿ ಪ್ರೌಢಶಾಲೆಯ ಆವರಣದಲ್ಲಿ ಬೆಳಿಗ್ಗೆ 11 ರಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭವಾಗಲಿದೆ. ತಾಲ್ಲೂಕು ಕಚೇರಿ ವ್ಯಾಪ್ತಿಯ 41 ಇಲಾಖೆಗಳಿಗೆ ಈಗಾಗಲೇ ಸಿದ್ದತೆ ಕುರಿತು ಮಾಹಿತಿ ನೀಡಲಾಗಿದ್ದು, ಅವಶ್ಯಕ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಫಲಾನುಭವಿಗಳ ಪಟ್ಟಿ ತಯಾರಿಸಿ, ಅವರಿಗೆ ಸೂಕ್ತ ಆಸನ ವ್ಯವಸ್ಥೆ ಮಾಡಿ, ಆದೇಶಗಳ ಸುಗಮ ವಿತರಣೆಗೆ ಸೂಕ್ತ ಸಿದ್ದತೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ದಿನಾಂಕ: 11-01-2023 ರಂದು ಜಿಲ್ಲಾಧಿಕಾರಿಗಳಾದ ಡಾ.ಆರ್.ಸೆಲ್ವಮಣಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆದಿದ್ದು, ಎಲ್ಲ ಇಲಾಖೆಗಳು, ನಿಗಮಗಳು ತಮ್ಮ ತಮ್ಮ ವ್ಯಾಪ್ತಿಯ ಫಲಾನುಭವಿಗಳ ಪಟ್ಟಿ ತಯಾರಿಸಿ, ಕಾರ್ಯಕ್ರಮದ ಸಮರ್ಪಕ ಆಯೋಜನೆಗೆ ಸೂಕ್ತ ವ್ಯವಸ್ಥೆ ಮತ್ತು ಸಿದ್ದತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಹಾಗೂ ಅಂದು ಇಲಾಖೆಗಳಿಂದ ಲಭ್ಯವಾಗುವ ವಿವಿಧ ಯೋಜನೆಗಳು, ಕಾರ್ಯಕ್ರಮಗಳ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿತೆ ಒದಗಿಸುವ ವಿವಿಧ 14 ಮಳಿಗೆಗಳನ್ನು ತೆರೆಯಲು ಸೂಚನೆ ನೀಡಿರುವನ್ವಯ ಸಿದ್ದತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಆರಕ್ಷಕ ಇಲಾಖೆಯವರು ಪೂರ್ವಭಾವಿಯಾಗಿ ಸ್ಥಳ ಪರಿಶೀಲನೆ ನಡೆಸಿ, ವಾಹನಗಳ ಪಾರ್ಕಿಂಗ್, ಸುಗಮ ಸಂಚಾರ ಹಾಗೂ ಇತರೆ ಸುರಕ್ಷತಾ ವ್ಯವಸ್ಥೆಯ ಅಚ್ಚುಕಟ್ಟು ನಿರ್ವಹಣೆ ಕುರಿತು ಕ್ರಮ ಕೈಗೊಳ್ಳಬೇಕೆಂದರು.

ಸಭೆಯಲ್ಲಿ ಡಿವೈಎಸ್‍ಪಿ ಸುರೇಶ್, ಉಪ ತಹಶೀಲ್ದಾರ್ ಗಣೇಶ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Previous post ಆದಿ ದ್ರಾವಿಡರ್ ಕೋ ಆಪರೇಟಿವ್ ಸೊಸೈಟಿ ಸರ್ವ ಸದಸ್ಯರ ಸಭೆ
Next post ಜ.19 ರಂದು ಶಿವಮೊಗ್ಗ ನಗರ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ