ಆಗಸ್ಟ್ 11 ರಿಂದ ಶಿವಮೊಗ್ಗ – ಬೆಂಗಳೂರು ನಡುವೆ ವಿಮಾನ ಹಾರಾಟ!

ಆಗಸ್ಟ್ 11 ರಿಂದ ಶಿವಮೊಗ್ಗ – ಬೆಂಗಳೂರು ನಡುವೆ ವಿಮಾನ ಹಾರಾಟ!


ಶಿವಮೊಗ್ಗ, ಜೂ. 11: ಅಂತೂ-ಇಂತೂ ಶಿವಮೊಗ್ಗ ವಿಮಾನ ನಿಲ್ದಾಣದಿಂದ, ವಿಮಾನಗಳ ಹಾರಾಟಕ್ಕೆ ಮೂಹೂರ್ತ ಕೂಡಿ ಬಂದಿದೆ. ಆಗಸ್ಟ್ 11 ರಿಂದ ಶಿವಮೊಗ್ಗ – ಬೆಂಗಳೂರು ನಡುವೆ ವಿಮಾನ ಸಂಚಾರ ಅಧಿಕೃತವಾಗಿ ಆರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ.

ಈಗಾಗಲೇ ವಿಮಾನ ಸಂಚಾರಕ್ಕೆ ಇಂಡಿಗೋ  ವಿಮಾನಯಾನ ಸಂಸ್ಥೆ, ಸಕಲ ಪೂರ್ವಭಾವಿ ತಯಾರಿ ನಡೆಸಲಾರಂಭಿಸಿದೆ. ಶಿವಮೊಗ್ಗ – ಬೆಂಗಳೂರು ನಡುವೆ 78 ಆಸನ ಸಾಮರ್ಥ್ಯದ ವಿಮಾನ ಸಂಚಾರಕ್ಕೆ ಸಂಸ್ಥೆ ಮುಂದಾಗಿದೆ ಎಂದು ತಿಳಿದುಬಂದಿದೆ.

ಲಭ್ಯ ಮಾಹಿತಿಗಳ ಅನುಸಾರ, ಪ್ರತಿ ದಿನ ಬೆಳಿಗ್ಗೆ 9 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿರುವ ವಿಮಾನವು, ಬೆಳಿಗ್ಗೆ 10.30 ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ. ಅದೇ ರೀತಿ ಮಧ್ಯಾಹ್ನ 12 ಕ್ಕೆ ಶಿವಮೊಗ್ಗದಿಂದ ಹೊರಟು 1.30 ಕ್ಕೆ ಬೆಂಗಳೂರು ತಲುಪಲಿದೆ ಎಂದು ಹೇಳಲಾಗಿದೆ.

ಪ್ರಯಾಣಿಕರ ದಟ್ಟಣೆ ಗಮನಿಸಿದ ನಂತರ ಶಿವಮೊಗ್ಗದಿಂದ ದೇಶದ ಇತರೆಡೆಗೆ ವಿಮಾನ ಸಂಚಾರ ಆರಂಭಕ್ಕೆ ಇಂಡಿಗೋ ಸಂಸ್ಥೆ ಮುಂದಾಗಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡು ನಾಲ್ಕು ತಿಂಗಳಾದ ನಂತರ ಲೋಹದ ಹಕ್ಕಿಗಳ

ಹಾರಾಟಕ್ಕೆ ವೇದಿಕೆ ಸಿದ್ದವಾಗುತ್ತಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗದಿಂದ ಯಾವೆಲ್ಲ ಊರುಗಳಿಗೆ ವಿಮಾನಯಾನ ಆರಂಭವಾಗಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.

ಮಲೆನಾಡಿನಲ್ಲಿ ವರ್ಷಧಾರೆಯ ಸಿಂಚನ..! Previous post ಮಲೆನಾಡಿನಲ್ಲಿ ವರ್ಷಧಾರೆಯ ಸಿಂಚನ..!
ವಿಶ್ವ ಟೆಸ್ಟ್ ಕ್ರಿಕೆಟ್ ಪಂದ್ಯಾವಳಿ : ಭಾರತಕ್ಕೆ ಸೋಲು – ಆಸ್ಟ್ರೇಲಿಯಾಕ್ಕೆ ಜಯ! Next post ವಿಶ್ವ ಟೆಸ್ಟ್ ಕ್ರಿಕೆಟ್ ಪಂದ್ಯಾವಳಿ : ಭಾರತಕ್ಕೆ ಸೋಲು!