ಸಾಗರ ಖಾಸಗಿ ವಸತಿ ಶಾಲೆಯಲ್ಲಿ ಬಾಲಕಿಯ ಅನುಮಾನಾಸ್ಪದ ಸಾವು ಪ್ರಕರಣ : ಶಿವಮೊಗ್ಗ ಎಸ್ಪಿ ಹೇಳಿದ್ದೇನು?

ಖಾಸಗಿ ವಸತಿ ಶಾಲೆಯಲ್ಲಿ ಬಾಲಕಿಯ ಅನುಮಾನಾಸ್ಪದ ಸಾವು ಪ್ರಕರಣ : ಶಿವಮೊಗ್ಗ ಎಸ್ಪಿ ಹೇಳಿದ್ದೇನು?

ಶಿವಮೊಗ್ಗ, ಜೂ. 12: ‘ಜಿಲ್ಲೆಯ ಸಾಗರ ಪಟ್ಟಣದ ಖಾಸಗಿ ವಸತಿ ಶಾಲೆಯೊಂದರಲ್ಲಿ, 13 ವರ್ಷದ 8 ನೇ ತರಗತಿ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವಿನ ಕುರಿತಂತೆ, ಮರಣೋತ್ತರ ಪರೀಕ್ಷೆ ಹಾಗೂ ಎಫ್.ಎಸ್.ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿ ಬಂದ ನಂತರ ಸಾವಿಗೆ ಸ್ಪಷ್ಟ ಕಾರಣವೆನೆಂಬುವುದು ಗೊತ್ತಾಗಬೇಕಾಗಿದೆ’ ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತಂತೆ ಸೋಮವಾರ ಅವರು ಹೇಳಿಕೆ ನೀಡಿದ್ದಾರೆ. ಈಗಾಗಲೇ ಬಾಲಕಿಯ ಸಾವಿನ ಕುರಿತಂತೆ ಭಾರತೀಯ ದಂಡ ಸಂಹಿತೆ ಕಲಂ (ಐಪಿಸಿ) 174 (3) ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವಿಸ್ರಾವನ್ನು ಎಫ್.ಎಸ್.ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಈ ವರದಿಗಳು ಬಂದ ನಂತರ ಬಾಲಕಿಯ ಸಾವಿಗೆ ಸ್ಪಷ್ಟ ಕಾರಣವೆನೆಂಬುವುದು ಗೊತ್ತಾಗಬೇಕಾಗಿದೆ ಎಂದು ಹೇಳಿದ್ದಾರೆ.

ಬಂಧನ: ಮತ್ತೋಂದೆಡೆ ಮೃತ ಬಾಲಕಿಯ ಸ್ನೇಹಿತೆಯೋರ್ವಳು ನೀಡಿದ ದೂರಿನ ಆಧಾರದ ಮೇಲೆ, ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಸತಿ ಶಾಲೆಯ ಮುಖ್ಯಸ್ಥ ಮಂಜಪ್ಪನ ವಿರುದ್ದ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ.

ಸದರಿ ಬಾಲಕಿಯು ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಘಟಕದ ಎದುರು ಮಂಜಪ್ಪನ ವಿರುದ್ದ ಕೆಲ ಆರೋಪಗಳನ್ನು ಮಾಡಿದ್ದು, ಇದರ ಆಧಾರದ ಮೇಲೆ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಮಂಜಪ್ಪನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಅನುಮಾನಾಸ್ಪದವಾಗಿ ಮೃತಪಟ್ಟ ಬಡ ಕುಟುಂಬದ ಬಾಲಕಿ!

*** ಸಾಗರದ ವನಶ್ರೀ ವಸತಿ ಶಾಲೆಯಲ್ಲಿ 8 ನೇ ತರಗತಿ ಅಭ್ಯಾಸ ಮಾಡುತ್ತಿದ್ದ, ಬಡ ಕುಟುಂಬಕ್ಕೆ ಸೇರಿದ ಸೊರಬ ತಾಲೂಕಿನ 13 ವರ್ಷದ ಬಾಲಕಿಯು ಕಳೆದ ಗುರುವಾರ ವಸತಿ ಶಾಲೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಶಾಲೆಯ ಮುಖ್ಯಸ್ಥರ ವಿರುದ್ದ ಆರೋಪಗಳು ಕೇಳಿಬಂದಿದ್ದವು. ಮತ್ತೊಂದೆಡೆ, ಬಾಲಕಿಯ ಪೋಷಕರು ಶಾಲೆಯ ಎದುರು ಪ್ರತಿಭಟನೆ ನಡೆಸಿದ್ದರು. ಬಾಲಕಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದರು. ಶಾಲಾ ಮುಖ್ಯಸ್ಥರ ಬಂಧನಕ್ಕೆ ಒತ್ತಾಯಿಸಿದ್ದರು.

ವಿಶ್ವ ಟೆಸ್ಟ್ ಕ್ರಿಕೆಟ್ ಪಂದ್ಯಾವಳಿ : ಭಾರತಕ್ಕೆ ಸೋಲು – ಆಸ್ಟ್ರೇಲಿಯಾಕ್ಕೆ ಜಯ! Previous post ವಿಶ್ವ ಟೆಸ್ಟ್ ಕ್ರಿಕೆಟ್ ಪಂದ್ಯಾವಳಿ : ಭಾರತಕ್ಕೆ ಸೋಲು!
ಶಿಕಾರಿಪುರ, ಶಿರಾಳಕೊಪ್ಪ ಪೊಲೀಸರಿಂದ ವಾಕಿಂಗ್ – ರನ್ನಿಂಗ್! Next post ಶಿಕಾರಿಪುರ, ಶಿರಾಳಕೊಪ್ಪ ಪೊಲೀಸರಿಂದ ವಾಕಿಂಗ್ – ರನ್ನಿಂಗ್!