ಮಲೆನಾಡಿನಲ್ಲಿ ಚುರುಕುಗೊಳ್ಳದ ಮುಂಗಾರು ಮಳೆ!

ಮಲೆನಾಡಿನಲ್ಲಿ ಚುರುಕುಗೊಳ್ಳದ ಮುಂಗಾರು ಮಳೆ!

– ಬಿ.ರೇಣುಕೇಶ್-

ಶಿವಮೊಗ್ಗ, ಜೂ. 13: ರಾಜ್ಯದ ಕರಾವಳಿ ಭಾಗಕ್ಕೆ ಮುಂಗಾರು ಮಳೆ ಕಾಲಿಟ್ಟಿದೆ. ಆದರೆ ಮಲೆನಾಡು ಭಾಗದಲ್ಲಿ ವರ್ಷಧಾರೆ ಚುರುಕುಗೊಂಡಿಲ್ಲ. ಸಂಪೂರ್ಣ ದುರ್ಬಲಗೊಂಡಿದೆ. ಇದರಿಂದ ಕೃಷಿ ಚಟುವಟಿಕೆ ಏರುಪೇರಾಗುವಂತೆ ಮಾಡಿದೆ!

ಕಳೆದ ವರ್ಷ ಜೂನ್ ಪ್ರಾರಂಭಕ್ಕೂ ಮೊದಲೇ, ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯಾಗುತ್ತಿತ್ತು. ನಿಗದಿತ ಅವಧಿಗೆ ಮುಂಗಾರು ಆರಂಭಗೊಂಡಿತ್ತು. ಇದರಿಂದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿದ್ದವು. ಕೆರೆಕಟ್ಟೆ, ಜಲಾಶಯಗಳಲ್ಲಿ ನೀರಿನ ಸಂಗ್ರಹ ಕೂಡ ಏರಿಕೆಯಾಗಿತ್ತು.

ಆದರೆ ಪ್ರಸ್ತುತ ವರ್ಷ ಬೇಸಿಗೆ ಅವಧಿಯಲ್ಲಿ ಜಿಲ್ಲೆಯಲ್ಲಿ ಹಿಂಗಾರು ಮಳೆಯ ಪ್ರಮಾಣ ಕೂಡ ಕಡಿಮೆಯಾಗಿತ್ತು. ವಾಡಿಕೆಯ ವರ್ಷಧಾರೆಯಾಗಿರಲಿಲ್ಲ. ಇದೀಗ ಮಳೆಗಾಲ ಆರಂಭದ ಜೂನ್ ಎರಡನೇ ವಾರ ಕಳೆದು, ಮೂರನೇ ವಾರ ಕಾಲಿಟ್ಟರೂ ಮುಂಗಾರು ಮಳೆ ಚುರುಕುಗೊಂಡಿಲ್ಲ.

ಮಲೆನಾಡಿನಲ್ಲಿ ಚುರುಕುಗೊಳ್ಳದ ಮುಂಗಾರು ಮಳೆ!

ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಯ ಹಲವೆಡೆ ಮಳೆ ಬೀಳಲಾರಂಭಿಸಿತ್ತು. ಆದರೆ ಇದೀಗ ಆ ವರ್ಷಧಾರೆಯೂ ಇಲ್ಲವಾಗಿದೆ. ಇನ್ನೊಂದೆಡೆ ಬಿಸಿಲ ಬೇಗೆ ಕೂಡ ಮುಂದುವರಿದಿದೆ. ಇದು ಸಹಜವಾಗಿಯೇ ರೈತ ಸಮುದಾಯದಲ್ಲಿ ಆತಂಕದ ಕರಿಛಾಯೆ ಆವರಿಸುವಂತೆ ಮಾಡಿದೆ. ಯಾವಾಗ ಮಳೆಯಾಗಲಿದೆಯೋ ಎಂದು ಕಾದು ಕುಳಿತುಕೊಳ್ಳುವಂತೆ ಮಾಡಿದೆ.

ಚಂಡಮಾರುತ ಎಫೆಕ್ಟ್: ಬಿಪರ್ ಜಾಯ್ ಚಂಡಮಾರುತ ಎಫೆಕ್ಟ್ ನಿಂದ ಮುಂಗಾರು ಮಳೆ ಏರುಪೇರಾಗುವಂತೆ ಮಾಡಿದೆ. ತೇವಾಂಶಭರಿತ ಮೋಡಗಳನ್ನು ಸೆಳೆದುಕೊಂಡ ಪರಿಣಾಮ ಮಳೆ ಮಾರುತಗಳು ದುರ್ಬಲಗೊಂಡಿದ್ದು, ಇದರಿಂದ ಮಳೆಯ ಮೇಲೆ ಪರಿಣಾಮ ಬೀರುವಂತಾಗಿದೆ ಎಂದು ಹವಾಮಾನ ಇಲಾಖೆ ಮೂಲಗಳು ಹೇಳುತ್ತವೆ.

ಸಂಕಷ್ಟ: ಈಗಾಗಲೇ ಜಿಲ್ಲೆಯ ಹಲವೆಡೆ ಕೆರೆಕಟ್ಟೆಗಳು ನೀರಿಲ್ಲದೆ ಬರಿದಾಗಿವೆ. ಜಲಾಶಯಗಳ ನೀರಿನ ಸಂಗ್ರಹದಲ್ಲಿಯೂ ಭಾರೀ ಇಳಿಕೆ ಕಂಡುಬಂದಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸಂಪೂರ್ಣ ಬರಿದಾಗುವ ಸ್ಥಿತಿಗೆ ತಲುಪಲಿದೆ. ಹಾಗೆಯೇ ಬೋರ್’ವೆಲ್, ಬಾವಿಗಳು ನೀರಿಲ್ಲದೆ ಒಣಗಲಾರಂಭಿಸಿವೆ.

ಪರಿಸ್ಥತಿ ಇದೇ ರೀತಿ ಮುಂದುವರಿದರೆ ಜಿಲ್ಲೆಯ ನಗರ-ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸ್ವರೂಪದ ಹಾಹಾಕಾರ ತಲೆದೋರುವ ಸಾಧ್ಯತೆಗಳು ಗೋಚರವಾಗುತ್ತಿವೆ.

ಇದೆಲ್ಲದರ ನಡುವೆ ಹವಾಮಾನ ಇಲಾಖೆಯು ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಚುರುಕುಗೊಳ್ಳಲಿದೆ. ಉತ್ತಮ ವರ್ಷಧಾರೆಯಾಗಲಿದೆ ಎಂದು ಹೇಳುತ್ತಿದೆ.

ಠಾಣೆಗಳ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ ಪೊಲೀಸರು Previous post ಠಾಣೆಗಳ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ ಪೊಲೀಸರು
ಮಿತಿಮೀರಿದ ವೇಗದಲ್ಲಿ ಬಸ್ ಓಡಿಸಿದ್ರೆ ಬೀಳುತ್ತೆ ಕೇಸ್..!’ Next post ‘ಖಾಸಗಿ ಬಸ್’ಗಳಲ್ಲಿ ಜೋರಾಗಿ ಹಾಡು ಹಾಕಿದ್ರೆ… ಮಿತಿಮೀರಿದ ವೇಗದಲ್ಲಿ ಬಸ್ ಓಡಿಸಿದ್ರೆ ಬೀಳುತ್ತೆ ಕೇಸ್..!’