
ನೆನೆಗುದಿಗೆ ಬಿದ್ದಿದ್ದ ಶಿವಮೊಗ್ಗ ಹೊರ ವರ್ತುಲ ರಸ್ತೆ 2 ನೇ ಹಂತ : ಅನುಷ್ಠಾನದ ಭರವಸೆ ನೀಡಿದ ಕೇಂದ್ರ ಭೂ ಸಾರಿಗೆ ಸಚಿವ ಗಡ್ಕರಿ!
-ಬಿ.ರೇಣುಕೇಶ್ –
ಶಿವಮೊಗ್ಗ, ಜೂ. 14: ಶಿವಮೊಗ್ಗ ನಗರದ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ ಹೊರವರ್ತುಲ ರಸ್ತೆಯ ಪ್ರಥಮ ಹಂತ (ದಕ್ಷಿಣ ಭಾಗ) ದ ಕಾಮಗಾರಿ ಪ್ರಗತಿಯಲ್ಲಿದೆ. ಈ ನಡುವೆ ಸಂಪೂರ್ಣ ನೆನೆಗುದಿಗೆ ಬಿದ್ದಿದ್ದ, ಎರಡನೇ ಹಂತ (ಉತ್ತರ ಭಾಗ) ದ ಯೋಜನೆಗೆ ಮತ್ತೇ ಜೀವ ಬಂದಿದೆ. ಕೇಂದ್ರ ಸರ್ಕಾರದ ಭೂ ಸಾರಿಗೆ ಸಚಿವಾಲಯದ ಅನುಮತಿ ದೊರಕುವ ಲಕ್ಷಣಗಳು ಗೋಚರವಾಗುತ್ತಿವೆ!
ನವದೆಹಲಿಯಲ್ಲಿ ಜೂ. 13 ರಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು, ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಶಿವಮೊಗ್ಗ ನಗರದ ಹೊರವಲಯದ ಉತ್ತರ ಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವರ್ತುಲ ರಸ್ತೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಸಚಿವರಿಗೆ ನೀಡಿದ್ದಾರೆ.

‘ಈಗಾಗಲೇ ಭೂ ಸಾರಿಗೆ ಸಚಿವಾಲಯಕ್ಕೆ ಯೋಜನೆಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಭೂ ಸ್ವಾದೀನ ವೆಚ್ಚದ ರಾಜ್ಯದ ಪಾಲುದಾರಿಕೆಯ ವಿವರ ನೀಡಲಾಗಿದೆ. ದಾಖಲೆಗಳ ಪರಿಶೀಲನೆ ನಡೆಸಿದ ಸಚಿವರು, ಯೋಜನೆಯ ಮಂಜೂರಾತಿಗಿರುವ ಅಡೆತಡೆಗಳನ್ನು ಶೀಘ್ರ ಪರಿಹರಿಸಬೇಕು. ಕಾಲಮಿತಿಯೊಳಗೆ ಯೋಜನೆಗೆ ಮಂಜೂರಾತಿ ನೀಡಬೇಕೇಂದು ಸಚಿವಾಲಯದ ಅಧಿಕಾರಿಗಳಿಗೆ ಸೂಚಿಸಿದ್ದಾರೆ’ ಎಂದು ಬಿ.ವೈ.ರಾಘವೇಂದ್ರ ಬುಧವಾರ ತಿಳಿಸಿದ್ದಾರೆ.
ಈ ಕುರಿತಂತೆ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ಕೇಂದ್ರ ಸಚಿವರ ಸೂಚನೆಯಿಂದ ಉತ್ತರ ಭಾಗದ ವರ್ತುಲ ರಸ್ತೆ 2 ನೇ ಹಂತದ ಮಂಜೂರಾತಿ ಪ್ರಕ್ರಿಯೆಗಳು ಚಾಲನೆಗೊಂಡಿವೆ. ಶೀಘ್ರದಲ್ಲಿಯೇ ಯೋಜನೆಗೆ ಮಂಜೂರಾತಿ ಪಡೆದು ಕಾಮಗಾರಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು’ ಎಂದು ಸಂಸದರು ಮಾಹಿತಿ ನೀಡಿದ್ದಾರೆ.
2009 ರಲ್ಲಿಯೇ ಸಿದ್ದವಾಗಿದ್ದ ಯೋಜನೆ
ಭವಿಷ್ಯದ ಶಿವಮೊಗ್ಗ ನಗರದ ಬೆಳವಣಿಗೆ, ವಾಹನ ದಟ್ಟಣೆ ಗಮನದಲ್ಲಿಟ್ಟುಕೊಂಡು 2009 ರಲ್ಲಿಯೇ 33 ಕಿ.ಮೀ. ಉದ್ದದ, 200 ಅಡಿ ಅಗಲದ ವರ್ತುಲ ರಸ್ತೆ ನಿರ್ಮಾಣ ಯೋಜನೆ ಸಿದ್ದಪಡಿಸಲಾಗಿತ್ತು. ಅಂದು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ವಿ.ಪೊನ್ನುರಾಜ್ ಹಾಗೂ ನಗರಾಭಿವೃದ್ದಿ ಕೋಶದ ಅಧಿಕಾರಿಯಾಗಿದ್ದ ಎ.ಆರ್.ರವಿ ಅವರು ಗುಜರಾತ್ ರಾಜ್ಯದ ಅಹಮದಬಾದ್ ಗೆ ತೆರಳಿ ಅಲ್ಲಿನ ವರ್ತುಲ ರಸ್ತೆ ವೀಕ್ಷಿಸಿ ಮಾಹಿತಿ ಪಡೆದುಕೊಂಡು ಬಂದಿದ್ದರು.
ಅಹಮದಬಾದ್ ಮಾದರಿಯಲ್ಲಿಯೇ ವರ್ತುಲ ರಸ್ತೆ ನಿರ್ಮಾಣದ ಕುರಿತಂತೆ ಜಿಲ್ಲಾಡಳಿತವು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಸದರಿ ಯೋಜನೆಗೆ ಬಜೆಟ್ ನಲ್ಲಿ ಅನುದಾನ ಕೂಡ ಮೀಸಲಿರಿಸಿದ್ದರು.
ಭೂ ಸ್ವಾದೀನ ಪ್ರಕ್ರಿಯೆಗಳು ಆರಂಭಗೊಂಡಿದ್ದವು. ಈ ವೇಳೆ ವಿ.ಪೊನ್ನುರಾಜ್ ವರ್ಗಾವಣೆಗೊಂಡಿದ್ದರು. ನಂತರ ಸಿಎಂ ಸ್ಥಾನದಿಂದ ಯಡಿಯೂರಪ್ಪ ನಿರ್ಗಮಿಸಿದ್ದರು. ಇದರಿಂದ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ನಂತರ ಬಂದ ಸರ್ಕಾರಗಳು ಯೋಜನೆ ಅನುಷ್ಠಾನಕ್ಕೆ ಕ್ರಮಕೈಗೊಂಡಿರಲಿಲ್ಲ.
ಮತ್ತೆ ಯೋಜನೆಗೆ ಚಾಲನೆ ಕೊಡಿಸಿದ ಬಿ.ವೈ.ರಾಘವೇಂದ್ರ
*** ಈ ನಡುವೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ವರ್ತುಲ ರಸ್ತೆ ಯೋಜನೆ ಅನುಷ್ಠಾನಕ್ಕೆ ಕ್ರಮಕೈಗೊಂಡಿದ್ದರು. ಶಿವಮೊಗ್ಗ ನಗರದ ಮೂಲಕ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳಿಗೆ ಬೈಪಾಸ್ ರಸ್ತೆಯ ರೀತಿಯಲ್ಲಿ ವರ್ತುಲ ರಸ್ತೆ ಅಭಿವೃದ್ದಿಪಡಿಸುವ ಯೋಜನೆ ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದರು. 2018 ರಲ್ಲಿ ಯಡಿಯೂರಪ್ಪ ಮತ್ತೇ ಮುಖ್ಯಮಂತ್ರಿಯಾದ ವೇಳೆ, ರಾಜ್ಯದ ಪಾಲುದಾರಿಕೆಯ ನೆರವು ದೊರಕಿತ್ತು. ಕೇಂದ್ರ ಭೂ ಸಾರಿಗೆ ಸಚಿವಾಲಯ ಕೂಡ ವರ್ತುಲ ರಸ್ತೆಯ ಒಂದನೇ ಹಂತಕ್ಕೆ ಹಸಿರು ನಿಶಾನೆ ತೋರ್ಪಡಿಸಿತ್ತು. ಸದ್ಯ 12 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಆದರೆ ಎರಡನೇ ಹಂತದ ರಸ್ತೆ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಕೇಂದ್ರ ಭೂ ಸಾರಿಗೆ ಸಚಿವಾಲಯಕ್ಕೆ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗೆ ಅನುಮತಿ ದೊರಕಿರಲಿಲ್ಲ. ಇದೀಗ 2 ನೇ ಹಂತದ ರಸ್ತೆ ನಿರ್ಮಾಣಕ್ಕೂ ಚಾಲನೆ ದೊರಕಲಾರಂಭಿಸಿದೆ. ಆದರೆ ಯಾವಾಗ ಯೋಜನೆ ಕಾರ್ಯಗತಗೊಳ್ಳಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಮೊದಲ ಹಂತದಲ್ಲಿ 14.74 ಕಿ.ಮೀ. ರಸ್ತೆ ನಿರ್ಮಾಣ
*** ದಕ್ಷಿಣ ಭಾಗದಲ್ಲಿ ಒಟ್ಟಾರೆ 14.74 ಕಿ.ಮೀ. ರಸ್ತೆ ನಿರ್ಮಿಸಲಾಗುತ್ತಿದೆ. ಎನ್.ಹೆಚ್.ಎ.ಐ ವತಿಯಿಂದ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ 8 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಕಾರ್ಯ ಪೂರ್ಣ ಹಂತಕ್ಕೆ ಬರಲಾರಂಭಿಸಿದೆ. ಆದರೆ 6 ಕಿ.ಮೀ. ನಷ್ಟ ರಸ್ತೆ ನಿರ್ಮಾಣ ಬಾಕಿಯಿದೆ. ಈ ಮೊದಲು ನಿಗದಿಪಡಿಸಿದ್ದ ಮಾರ್ಗಕ್ಕೆ ಬದಲಾಗಿ, ಬೇರೆ ಮಾರ್ಗದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾದ ಪರಿಣಾಮದಿಂದ ಆಡಳಿತಾತ್ಮಕ ಅಡೆತಡೆಗಳು ಎದುರಾಗಿವೆ. ಭೂ ಸ್ವಾದೀನ ಸಮಸ್ಯೆಯೂ ಉಲ್ಬಣಿಸಿದೆ. ಈ ಮೊದಲೇ ನಿರ್ಧರಿಸಿದ್ದ ಮಾರ್ಗದಲ್ಲಿ ಯೋಜನೆ ಅನುಷ್ಠಾನಗೊಂಡಿದ್ದರೆ, ಈ ವೇಳೆಗಾಗಲೇ ದಕ್ಷಿಣ ಭಾಗದ ರಸ್ತೆ ನಿರ್ಮಾಣ ಕಾರ್ಯ ಶೇ. 80 ರಷ್ಟು ಪೂರ್ಣವಾಗುತ್ತಿತ್ತು ಎಂದು ಮೂಲಗಳು ಹೇಳುತ್ತವೆ.
ಎರಡನೇ ಹಂತದಲ್ಲಿ 15 ಅಥವಾ 18 ಕಿ.ಮೀ. ರಸ್ತೆ ನಿರ್ಮಾಣ
*** ಎರಡನೇ ಹಂತದ ಉತ್ತರ ಭಾಗದಲ್ಲಿ 15 ಅಥವಾ 18 ಕಿ.ಮೀ. ಉದ್ದದ ರಸ್ತೆ ನಿರ್ಮಾಣದ ಯೋಜನೆ ಸಿದ್ದಪಡಿಸಲಾಗಿದೆ. ಈ ಸಂಬಂಧ ಎರಡು ಪ್ರಸ್ತಾವನೆಗಳನ್ನು ಕೇಂದ್ರ ಭೂ ಸಾರಿಗೆ ಸಚಿವಾಲಯಕ್ಕೆ ಸಲ್ಲಿಕೆಯಾಗಿದೆ. ಎರಡರಲ್ಲಿ ಒಂದು ಪ್ರಸ್ತಾವನೆಗೆ ಸಚಿವಾಲಯ ಅನುಮತಿ ನೀಡಬೇಕಾಗಿದೆ. ಆದರೆ ಕೆಲ ತಾಂತ್ರಿಕ ಕಾರಣ ಮುಂದಿಟ್ಟುಕೊಂಡು ಯೋಜನೆಗೆ ಅನುಮತಿ ನೀಡಿರಲಿಲ್ಲ. ಇದೀಗ ಸಂಸದ ಬಿ.ವೈ.ರಾಘವೇಂದ್ರರವರು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಒತ್ತಡ ಹಾಕುವ ಮೂಲಕ, ನೆನೆಗುದಿಗೆ ಬಿದ್ದಿದ್ದ ಯೋಜನೆ ಅನುಷ್ಠಾನಕ್ಕೆ ಕ್ರಮಕೈಗೊಂಡಿದ್ದಾರೆ.