
ಮುಂಗಾರು ಮಳೆ ಕಣ್ಮರೆ : ಲಿಂಗನಮಕ್ಕಿ, ತುಂಗಾ, ಭದ್ರಾ ಡ್ಯಾಂಗಳ ನೀರಿನ ಸಂಗ್ರಹದಲ್ಲಿ ಭಾರೀ ಕುಸಿತ!
-ಬಿ. ರೇಣುಕೇಶ್–
ಶಿವಮೊಗ್ಗ, ಜೂ. 16: ಮಲೆನಾಡಿನಲ್ಲಿ ಮುಂಗಾರು ಮಳೆ ಸಂಪೂರ್ಣ ಕಣ್ಮರೆಯಾಗಿದೆ. ಕಳೆದ ವಾರ ಕಂಡುಬಂದಿದ್ದ ಸಾಧಾರಣ ವರ್ಷಧಾರೆಯೂ ಪ್ರಸ್ತುತ ಇಲ್ಲವಾಗಿದೆ. ಬೇಸಿಗೆ ರಣ ಬಿಸಿಲು ಮುಂದುವರಿದಿದೆ. ಇದು ಕೆರೆಕಟ್ಟೆ, ಡ್ಯಾಂಗಳ ನೀರಿನ ಸಂಗ್ರಹದ ಮೇಲೆ ಪರಿಣಾಮ ಬೀರುವಂತಾಗಿದೆ!
ಜಿಲ್ಲೆಯ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ತುಂಗಾ, ಭದ್ರಾ ಡ್ಯಾಂಗಳ ನೀರಿನ ಸಂಗ್ರಹದಲ್ಲಿ ದಿನದಂದ ದಿನಕ್ಕೆ ಭಾರೀ ಇಳಿಕೆ ಕಂಡುಬರಲಾರಂಭಿಸಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಡ್ಯಾಂಗಳು ನೀರಿಲ್ಲದೆ ಬರಿದಾಗುವ ಹಂತಕ್ಕೆ ಬಂದರೂ ಅಚ್ಚರಿಯಿಲ್ಲವಾಗಿದೆ!
ಶುಕ್ರವಾರದ ಮಾಹಿತಿ ಅನುಸಾರ, ಲಿಂಗನಮಕ್ಕಿ ಡ್ಯಾಂ ನೀರಿನ ಸಂಗ್ರಹದ ಪ್ರಮಾಣ 1742 (ಗರಿಷ್ಠ ಮಟ್ಟ : 1819) ಅಡಿಯಿದೆ. 110 ಕ್ಯೂಸೆಕ್ ಒಳಹರಿವಿದೆ. 2898 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 1750 ಕ್ಯೂಸೆಕ್ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ ಡ್ಯಾಂನಲ್ಲಿ 8 ಅಡಿಯಷ್ಟು ಕಡಿಮೆ ನೀರು ಸಂಗ್ರಹವಾಗಿದೆ.
ಭದ್ರಾ ಡ್ಯಾಂ ನೀರಿನ ಸಂಗ್ರಹ 137 (ಗರಿಷ್ಠ ಮಟ್ಟ : 186) ಅಡಿಯಿದೆ. 61 ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದ್ದು, 150 ಕ್ಯೂಸೆಕ್ ನಷ್ಟು ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 150 ಅಡಿ ನೀರು ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ ಡ್ಯಾಂನಲ್ಲಿ 13 ಅಡಿಯಷ್ಟು ಕಡಿಮೆ ನೀರು ಸಂಗ್ರಹವಾಗಿದೆ.
ಉಳಿದಂತೆ ಕಳೆದ ವರ್ಷ ಭಾರೀ ಮಳೆಯ ಕಾರಣದಿಂದ, ಈ ವೇಳೆಗಾಗಲೇ ತುಂಗಾ ಡ್ಯಾಂ ಗರಿಷ್ಠ ಮಟ್ಟ ತಲುಪಿತ್ತು. ಡ್ಯಾಂನ ಎಲ್ಲ ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಹರಿಸಲಾಗುತ್ತಿತ್ತು. ಪ್ರಸ್ತುತ ವರ್ಷ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ, ಇಲ್ಲಿಯವರೆಗೂ ಡ್ಯಾಂಗೆ ನೀರಿನ ಒಳಹರಿವೇ ಆರಂಭವಾಗಿಲ್ಲ! ಶುಕ್ರವಾರದ ಮಾಹಿತಿ ಅನುಸಾರ, ಡ್ಯಾಂನಲ್ಲಿ 584.14 (ಗರಿಷ್ಠ ಮಟ್ಟ : 588.24) ಅಡಿ ನೀರು ಸಂಗ್ರಹವಾಗಿದೆ.
‘ಶಿವಮೊಗ್ಗ ನಗರಕ್ಕೆ15 ದಿನದವರೆಗೆ ಕುಡಿಯುವ ನೀರು ಪೂರೈಕೆ ಸಾಧ್ಯ’ : ಜಲ ಮಂಡಳಿ ಅಧಿಕಾರಿ ಸಿದ್ದಣ್ಣ
ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುವ ತುಂಗಾ ಜಲಾಶಯದ ನೀರಿನ ಸಂಗ್ರಹದಲ್ಲಿ ದಿನದಿಂದ ದಿನಕ್ಕೆ ಇಳಿಕೆ ಕಂಡುಬರಲಾರಂಭಿಸಿದೆ. ಮತ್ತೊಂದೆಡೆ, ಡ್ಯಾಂ ಜಲಾನಯನ ಪ್ರದೇಶದಲ್ಲಿ ಮಳೆ ಕಣ್ಮರೆಯಾಗಿದೆ. ಬಿಸಿಲ ತಾಪವೂ ಏರಿಕೆಯಾಗಿದೆ. ನೀರಿನ ಆವಿಯ ಪ್ರಮಾಣವು ಹೆಚ್ಚಾಗಿದೆ. ಇದರಿಂದ ಡ್ಯಾಂ ಜಲ ಸಂಗ್ರಹ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಇಳಿಕೆ ಕಂಡುಬರಲಾರಂಭಿಸಿದೆ.
‘ಮುಂದಿನ 15 ದಿನದವರೆಗೆ ನಿರಂತರವಾಗಿ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ. ತದನಂತರ ನಗರದ ಕುಡಿಯುವ ನೀರು ಪೂರೈಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ಕಾರಣದಿಂದ ನಾಗರೀಕರು ಕುಡಿಯುವ ನೀರು ವ್ಯರ್ಥವಾಗದಂತೆ ಎಚ್ಚರವಹಿಸಬೇಕು’ ಎಂದು ಕರ್ನಾಟಕ ನೀರು ಸರಬರಾಜು ಮಂಡಳಿ ಕಾರ್ಯಪಾಲಕ ಅಭಿಯಂತರ (ಇಇ) ಸಿದ್ದಣ್ಣ ಅವರು ತಿಳಿಸಿದ್ದಾರೆ.
ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡು, ಡ್ಯಾಂಗೆ ನೀರು ಹರಿದು ಬರಲಾರಂಭಿಸಿದರೆ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ’ ಎಂದು ಅಭಿಪ್ರಾಯಪಡುತ್ತಾರೆ.