ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ: ಬರೋಬ್ಬರಿ 27 ವರ್ಷಗಳಿಂದ ಪರಿಷ್ಕರಣೆಯಾಗದ ಶಿವಮೊಗ್ಗ ನಗರ ವ್ಯಾಪ್ತಿ..!

ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ: ಬರೋಬ್ಬರಿ 27 ವರ್ಷಗಳಿಂದ ಪರಿಷ್ಕರಣೆಯಾಗದ ಶಿವಮೊಗ್ಗ ನಗರ ವ್ಯಾಪ್ತಿ..!

– ಬಿ.ರೇಣುಕೇಶ್ –

ಶಿವಮೊಗ್ಗ, ಜೂ. 17: ನಗರ-ಪಟ್ಟಣಗಳ ಬೆಳವಣಿಗೆಗೆ ಅನುಗುಣವಾಗಿ, ನಿಯಮಿತವಾಗಿ ಸ್ಥಳಿಯಾಡಳಿತಗಳ ವ್ಯಾಪ್ತಿ ವಿಸ್ತರಣೆ ಮಾಡಲಾಗುತ್ತದೆ. ಆದರೆ ಶಿವಮೊಗ್ಗ ನಗರಕ್ಕೆ ಸಂಬಂಧಿಸಿದಂತೆ, ಬರೋಬ್ಬರಿ ಕಳೆದ 27 ವರ್ಷಗಳಿಂದ ನಗರ ವ್ಯಾಪ್ತಿ ಪರಿಷ್ಕರಣೆಯಾಗಿಲ್ಲ..!

ಹೌದು. ರಾಷ್ಟ್ರ – ರಾಜ್ಯದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಎರಡನೇ ಹಂತದ ನಗರಗಳಲ್ಲೊಂದಾದ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಭಿವೃದ್ದಿ ಹೊಂದುತ್ತಿರುವ ಶಿವಮೊಗ್ಗ ಪಾಲಿಕೆ ವ್ಯಾಪ್ತಿ ವಿಸ್ತರಣೆ ಕುರಿತಂತೆ, ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ.

ಇದರಿಂದ ನಗರದ ಹೊರವಲಯದಲ್ಲಿನ ದೊಡ್ಡ ದೊಡ್ಡ ಬಡಾವಣೆಗಳು ಇಂದಿಗೂ ಗ್ರಾಮ ಪಂಚಾಯ್ತಿ ಆಡಳಿತದ ಅಧೀನದಲ್ಲಿಯೇ ಮುಂದುವರಿಯುವಂತಾಗಿದೆ. ಮೂಲಸೌಕರ್ಯಗಳ ಕೊರತೆಯಿಂದ ನಲುಗುವಂತಾಗಿದೆ. ಅಸ್ತವ್ಯಸ್ತವಾಗಿ ನಗರ ಬೆಳೆಯುವಂತಾಗಿದೆ. ನಾಗರೀಕರು ನಾನಾ ರೀತಿಯ ಸಮಸ್ಯೆ ಎದುರಿಸುವಂತಾಗಿದೆ.

1996 ರಲ್ಲಿ ಅಂದಿನ ನಗರಸಭೆ ವ್ಯಾಪ್ತಿ ವಿಸ್ತರಣೆ ಮಾಡಲಾಗಿತ್ತು. ನಗರಕ್ಕೆ ಹೊಂದಿಕೊಂಡಂತಿದ್ದ ಸುತ್ತಮುತ್ತಲಿನ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿತ್ತು. ತದನಂತರ 2013 ರಲ್ಲಿ ನಗರಸಭೆ ಆಡಳಿತವನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಈ ವೇಳೆ ನಗರಸಭೆ ವ್ಯಾಪ್ತಿಯನ್ನೇ ಉಳಿಸಿಕೊಂಡು, ಪಾಲಿಕೆ ಅಸ್ತಿತ್ವಕ್ಕೆ ತರುವ ನಿರ್ಣಯ ಕೈಗೊಳ್ಳಲಾಗಿತ್ತು.

ಮತ್ತೊಂದೆಡೆ, 2014-15 ರ ಸಾಲಿನಲ್ಲಿ ರಾಜ್ಯಾದ್ಯಂತ ನಗರ-ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಪರಿಷ್ಕರಣೆ  ಮಾಡಲು ರಾಜ್ಯ ಸರ್ಕಾರ ಕ್ರಮಕೈಗೊಂಡಿತ್ತು. ಈ ಸಂದರ್ಭದಲ್ಲಿ ಪಾಲಿಕೆ ವ್ಯಾಪ್ತಿ ವಿಸ್ತರಣೆಗೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಕ್ರಮಕೈಗೊಂಡಿರಲಿಲ್ಲ. ಪಾಲಿಕೆ ವ್ಯಾಪ್ತಿ ವಿಸ್ತರಣೆ ವಿರುದ್ದ ಅಂದಿನ ಪಾಲಿಕೆ ಆಡಳಿತ ನಿರ್ಣಯ ಅಂಗೀಕರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿತ್ತು!

ಇದರಿಂದ ನಗರದ ಹೊರವಲಯದಲ್ಲಿ ನಿರ್ಮಾಣವಾಗಿರುವ, ಗ್ರಾಮ ಪಂಚಾಯ್ತಿ ಅಧೀನದಲ್ಲಿರುವ ಬಡಾವಣೆಗಳು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗುವ ಅವಕಾಶ ವಂಚಿತವಾಗುವಂತಾಗಿತ್ತು.  

ಸಮಸ್ಯೆಗಳ ಸರಮಾಲೆ: ಗ್ರಾಪಂ ಆಡಳಿತಗಳಿಂದ ಬಡಾವಣೆಗಳ ನಿರ್ವಹಣೆ, ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಅನುದಾನ – ಸಿಬ್ಬಂದಿಗಳ ಕೊರತೆ ಸೇರಿದಂತೆ ನಾನಾ ಆಡಳಿತಾತ್ಮಕ ಕಾರಣಗಳಿಂದ ನಾಗರೀಕರಿಗೆ ಸೌಲಭ್ಯಗಳು ಸಮರ್ಪಕವಾಗಿ ದೊರಕುತ್ತಿಲ್ಲ. ಹಲವೆಡೆ ವರ್ಷಗಳೇ ಉರುಳಿದರೂ ಚರಂಡಿಗಳ ಸ್ವಚ್ಛ ಮಾಡಲಾಗದಂತಹ ದುಃಸ್ಥಿತಿಯಿದೆ!

ಈ ಕಾರಣದಿಂದ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ವಿಸ್ತರಣೆ ಮಾಡಬೇಕು. ವೈಜ್ಞಾನಿಕವಾಗಿ ವಾರ್ಡ್ ಗಳ ಪುನರ್ ವಿಂಗಡಣೆ ಮಾಡುವುದರ ಜೊತೆಗೆ, ವಾರ್ಡ್ ಗಳ ಸಂಖ್ಯೆ ಹೆಚ್ಚಿಸಬೇಕೆಂಬ ಬೇಡಿಕೆ ನಾಗರೀಕರದ್ದಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಆದ್ಯ ಗಮನಹರಿಸಬೇಕಾಗಿದೆ ಎಂಬುವುದು ನಾಗರೀಕರ ಆಗ್ರಹವಾಗಿದೆ.

ಸರ್ವ ದಿಕ್ಕುಗಳಲ್ಲಿಯೂ ಅಭಿವೃದ್ದಿ : ಮರೀಚಿಕೆಯಾದ ಸೌಲಭ್ಯಗಳು..!

*** ಕಳೆದ ಎರಡು ದಶಕದ ಅವಧಿಯಲ್ಲಿ ನಗರದ ಅಭಿವೃದ್ದಿಯ ದಿಕ್ಕೇ ಬದಲಾಗಿದೆ. ಸರ್ವ ದಿಕ್ಕೂಗಳಲ್ಲಿಯೂ ಶರವೇಗದಲ್ಲಿ ನಗರ ಬೆಳೆಯುತ್ತಿದೆ. ನಗರದ ಹೊರವಲಯ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ, ದೊಡ್ಡ ದೊಡ್ಡ ವಸತಿ ಬಡಾವಣೆಗಳು ಅಭಿವೃದ್ದಿಗೊಂಡಿವೆ. ಪ್ರಸ್ತುತ ಕೂಡ ಹೊಸ ಹೊಸ ಲೇಔಟ್ ಗಳು ನಿರ್ಮಾಣವಾಗುತ್ತಲೇ ಇವೆ. ಸರ್ಕಾರಿ ಸ್ವಾಮ್ಯದಲ್ಲಿ ವಿಮಾನ ನಿಲ್ದಾಣ, ವಿಶ್ವವಿದ್ಯಾಲಯ, ರೈಲ್ವೆ ಕೋಚಿಂಗ್ ಡಿಪೋ, ಉಗ್ರಾಣ, ಟ್ರಕ್ ಟರ್ಮಿನಲ್, ಹೊರವರ್ತುಲ ರಸ್ತೆ ಸೇರಿದಂತೆ ಹಲವು ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಇದರ ಜೊತೆಗೆ ಜೊತೆಗೆ ಹತ್ತು ಹಲವು ವಾಣಿಜ್ಯ ಸಂಬಂಧಿತ ಚಟುವಟಿಕೆಗಳು ಸಮರೋಪಾದಿಯಲ್ಲಿ ಅಭಿವೃದ್ದಿಯಾಗುತ್ತಿವೆ. ಆದರೆ ಇದಕ್ಕನುಗುಣವಾಗಿ ನಗರಾಡಳಿತ ವ್ಯಾಪ್ತಿ ವಿಸ್ತರಣೆಯಾಗುತ್ತಿಲ್ಲ. ಜನವಸತಿ ಪ್ರದೇಶಗಳಿಗೆ ಮೂಲಸೌಕರ್ಯ ಲಭ್ಯವಾಗುತ್ತಿಲ್ಲ. ಸಂಪನ್ಮೂಲ ಸಂಗ್ರಹಣೆಯಾಗುತ್ತಿಲ್ಲ.

ಮುಂಗಾರು ಮಳೆ ಕಣ್ಮರೆ : ಲಿಂಗನಮಕ್ಕಿ, ತುಂಗಾ, ಭದ್ರಾ ಡ್ಯಾಂಗಳ ನೀರಿನ ಸಂಗ್ರಹದಲ್ಲಿ ಭಾರೀ ಕುಸಿತ! Previous post ಮುಂಗಾರು ಮಳೆ ಕಣ್ಮರೆ : ಲಿಂಗನಮಕ್ಕಿ, ತುಂಗಾ, ಭದ್ರಾ ಡ್ಯಾಂಗಳ ನೀರಿನ ಸಂಗ್ರಹದಲ್ಲಿ ಭಾರೀ ಕುಸಿತ!
ಅಪಾಯಕಾರಿ ಪ್ಲಾಸ್ಟಿಕ್ ಕವರ್’ಗೆ ಸೆಡ್ಡು ಹೊಡೆದ ಪರಿಸರ ಸ್ನೇಹಿ ಮೆಕ್ಕೆಜೋಳ - ಸಬ್ಬಕ್ಕಿಯಿಂದ ತಯಾರಿಸಿದ ಕ್ಯಾರಿ ಬ್ಯಾಗ್’ಗಳು..! Next post ಅಪಾಯಕಾರಿ ಪ್ಲಾಸ್ಟಿಕ್ ಕವರ್’ಗೆ ಸೆಡ್ಡು ಹೊಡೆದ ಪರಿಸರ ಸ್ನೇಹಿ ಮೆಕ್ಕೆಜೋಳ – ಸಬ್ಬಕ್ಕಿಯಿಂದ ತಯಾರಿಸಿದ ಕ್ಯಾರಿ ಬ್ಯಾಗ್’ಗಳು..!