
ಅಪಾಯಕಾರಿ ಪ್ಲಾಸ್ಟಿಕ್ ಕವರ್’ಗೆ ಸೆಡ್ಡು ಹೊಡೆದ ಪರಿಸರ ಸ್ನೇಹಿ ಮೆಕ್ಕೆಜೋಳ – ಸಬ್ಬಕ್ಕಿಯಿಂದ ತಯಾರಿಸಿದ ಕ್ಯಾರಿ ಬ್ಯಾಗ್’ಗಳು..!
ಶಿವಮೊಗ್ಗ, ಜೂ. 17: ಪರಿಸರ ಮಾತ್ರವಲ್ಲದೆ ಜೀವ ಸಂಕುಲಕ್ಕೂ ಅಪಾಯಕಾರಿಯಾಗಿ ಪರಿಣಮಿಸಿರುವ, ಎಂದಿಗೂ ಕೊಳೆಯದ ಪ್ಲ್ಯಾಸ್ಟಿಕ್ ಕ್ಯಾರಿ ಬ್ಯಾಗ್ ಗಳಿಗೆ, ಪರ್ಯಾಯವಾಗಿ ಮೆಕ್ಕೆಜೋಳ ಹಾಗೂ ಸಬ್ಬಕ್ಕಿ ಬಳಸಿ ವಿಶೇಷ ತಂತ್ರಜ್ಞಾನದ ಮೂಲಕ ಜೈವಿಕ ಕ್ಯಾರಿ ಬ್ಯಾಗ್ ಗಳನ್ನು ಒನ್ ನೆಸ್ ಸಂಸ್ಥೆ ತಯಾರಿಸಿದೆ. ಈ ಮೂಲಕ ಹೊಸ ಸಾಧನೆಗೆ ಮುನ್ನುಡಿ ಬರೆದಿದೆ.
ಈ ಕುರಿತಂತೆ ಶನಿವಾರ ಸಂಸ್ಥೆಯ ಮುಖ್ಯಸ್ಥ ಎ.ಎನ್.ಪ್ರಕಾಶ್ ಅವರು ಶಿವಮೊಗ್ಗ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ವಿಶೇಷ ಜೈವಿಕ ಕ್ಯಾರಿ ಬ್ಯಾಗ್ ಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಇದು ಪರಿಸರ ಸ್ನೇಹಿಯಾಗಿದೆ. ಮಣ್ಣಿನಲ್ಲಿ ಕೊಳೆಯುತ್ತದೆ. ಜಾನುವಾರುಗಳು ಸೇವಿಸಿದರೂ ಯಾವುದೇ ತೊಂದರೆಯಾಗುವುದಿಲ್ಲ. ಕಾರ್ಬನ್ ಡೈ ಆಕ್ಸೈಡ್ ಮುಕ್ತವಾಗಿದೆ. ಸುಟ್ಟರೇ ಬೂದಿಯಾಗುತ್ತದೆ. ಮೆಕ್ಕೆಜೋಳ, ಸಬ್ಬಕ್ಕಿ ಬಳಸಿ ಈ ಕ್ಯಾರಿಬ್ಯಾಗ್ ತಯಾರಿಸಲಾಗುತ್ತದೆ ಎಂದು ತಿಳಿಸಿದರು.
ರೋಹಿತ್ ಎಂಬುವರು ಮಾತನಾಡಿ, ನೂತನ ಕ್ಯಾರಿ ಬ್ಯಾಗ್ ಗಳಿಗೆ ಡಿ.ಆರ್.ಡಿ.ಓ ಮಾನ್ಯತೆ ನೀಡಿದೆ. ಈಗಾಗಲೇ ಎಲ್ಲ ರೀತಿಯ ಪರೀಕ್ಷೆ ಮಾಡಲಾಗಿದ್ದು, ಪರಿಸರ ಸ್ನೇಹಿಯಾಗಿದೆ ಎಂಬುವುದನ್ನು ದೃಢಪಡಿಸಿದೆ.
ಆಸ್ಪತ್ರೆಗಳ ತ್ಯಾಜ್ಯ ಸಂಗ್ರಹಣೆ, ದಿನಸಿ ಪದಾರ್ಥ ಕೊಂಡೊಯ್ಯುವುದು, ಊಟದ ಟೇಬಲ್ ಮೇಲೆ ಹಾಕುವುದು ಸೇರಿದಂತೆ ಎಲ್ಲ ರೀತಿಯ ಉತ್ಪನ್ನ ಸಾಗಾಣೆಗೆ ಅನುಕೂಲವಾಗುವ ಕ್ಯಾರಿ ಬ್ಯಾಗ್ ಗಳನ್ನು ತಯಾರಿಸುತ್ತಿದ್ದೆವೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜಿ.ವಿಜಯಕುಮಾರ್ ಅವರು ಉಪಸ್ಥಿತರಿದ್ದರು.