
ಶಿವಮೊಗ್ಗ : ಮನೆಯಲ್ಲಿ ಒಂಟಿ ಮಹಿಳೆಯ ನಿಗೂಢ ಸಾವು – ಕೊಲೆ ಶಂಕೆ?
ಶಿವಮೊಗ್ಗ, ಜೂ. 18: ಶಿವಮೊಗ್ಗದ ವಿಜಯನಗರ ಗುತ್ಯಪ್ಪ ಕಾಲೋನಿಯ ಮನೆಯೊಂದರಲ್ಲಿ ಗೃಹಿಣಿಯೋರ್ವರು ನಿಗೂಢವಾಗಿ ಸಾವನ್ನಪ್ಪಿದ್ದು, ಕೊಲೆ ಶಂಕೆ ವ್ಯಕ್ತವಾಗುತ್ತಿದೆ!
ಕಮಲಮ್ಮ (57) ನಿಗೂಢವಾಗಿ ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ವಿಜಯನಗರದ 2 ನೇ ತಿರುವಿನಲ್ಲಿರುವ ವಾಸದ ಮನೆಯಲ್ಲಿ ಅವರ ಶವ ಪತ್ತೆಯಾಗಿದೆ. ಭಾನುವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.
ಮೃತ ಕಮಲಮ್ಮ ಅವರ ಪತಿ ಮಲ್ಲಿಕಾರ್ಜುನ್ ಅವರು ಹೊರ ಜಿಲ್ಲೆಯೊಂದರಲ್ಲಿ, ನೀರಾವರಿ ಇಲಾಖೆಯಲ್ಲಿ ಕಾರ್ಯಪಾಲಕ ಎಂಜಿನಿಯರ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇವರ ಪುತ್ರ ವಿದ್ಯಾಭ್ಯಾಸದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎಂದು ತಿಳಿದುಬಂದಿದೆ.
ಮಲ್ಲಿಕಾರ್ಜುನ್ ಅವರು ಸ್ನೇಹಿತರ ಜೊತೆ ಗೋವಾಕ್ಕೆ ಪ್ರವಾಸ ತೆರಳಿದ್ದರು. ಶನಿವಾರ ಕಮಲಮ್ಮ ಅವರು ಮನೆಯಲ್ಲಿ ಓರ್ವರೇ ಇದ್ದರು ಎನ್ನಲಾಗಿದೆ. ಪತ್ನಿಯ ಮೊಬೈಲ್ ಪೋನ್ ಗೆ ಕರೆ ಮಾಡಿದ ವೇಳೆ, ಕಮಲಮ್ಮರವರು ಪೋನ್ ಕರೆ ಸ್ವೀಕರಿಸಿಲ್ಲ.
ಈ ಹಿನ್ನೆಲೆಯಲ್ಲಿ ನೆರೆಹೊರೆಯ ಪರಿಚಯಸ್ಥರಿಗೆ ಮಾಹಿತಿ ನೀಡಿದ್ದಾರೆ. ನೆರೆಹೊರೆಯವರು ಮನೆಗೆ ಆಗಮಿಸಿದಾಗ, ಅಡುಗೆ ಮನೆಯಲ್ಲಿ ಕಮಲಮ್ಮ ಅವರ ಶವ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ದೌಡಾಯಿಸಿದ್ದಾರೆ. ದಾವಣಗೆರೆಯಿಂದ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಕೂಡ ಆಗಮಿಸುತ್ತಿದ್ದಾರೆ. ಅವರ ಆಗಮನದ ನಂತರವಷ್ಟೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.
ನಿಗೂಢ: ಕಮಲಮ್ಮ ಅವರ ಸಾವಿನ ಸುತ್ತ ಅನುಮಾನದ ಹುತ್ತಗಳು ನಿರ್ಮಾಣವಾಗುತ್ತಿವೆ. ಮೇಲ್ನೋಟಕ್ಕೆ ಅವರ ಕೊಲೆ ಮಾಡಿರುವ ಶಂಕೆಗಳು ವ್ಯಕ್ತವಾಗುತ್ತಿವೆ. ಮತ್ತೊಂದೆಡೆ, ಪೊಲೀಸ್ ಇಲಾಖೆಯು ಪ್ರಕರಣದ ಕುರಿತಂತೆ ಇನ್ನಷ್ಟೆ ಮಾಹಿತಿ ನೀಡಬೇಕಾಗಿದೆ. ತದನಂತರವಷ್ಟೆ ಸ್ಪಷ್ಟ ವಿವರಗಳು ತಿಳಿದುಬರಬೇಕಾಗಿದೆ.