
ಪ್ರಧಾನಮಂತ್ರಿ ವಿಮಾನ ಲ್ಯಾಂಡಿಂಗ್ ಮಾಡಿಸುವ ಮೂಲಕ ಉದ್ಘಾಟನೆ!
ಶಿವಮೊಗ್ಗ, ಜ. 18: ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಮಾನ ಲ್ಯಾಂಡಿಂಗ್ ಮಾಡಿಸುವ ಮೂಲಕ ಉದ್ಘಾಟಿಸುವ ಚಿಂತನೆ ನಡೆಸಲಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಬುಧವಾರ ವಿಮಾನ ನಿಲ್ದಾಣ ಆವರಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈಗಾಗಲೇ ಸ್ಟಾರ್ ಏರ್ ಲೈನ್ಸ್ ಸಂಸ್ಥೆ ಶಿವಮೊಗ್ಗದಿಂದ ವಿಮಾನಗಳ ಕಾರ್ಯಾಚರಣೆಗೆ ನಿರ್ಧರಿಸಿದೆ. ಉಳಿದ ವಿಮಾನಯಾನ ಸಂಸ್ಥೆಗಳ ಜೊತೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದರು.
ಪ್ರಥಮ ಹಂತದಲ್ಲಿ ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಸಂಪರ್ಕ ಲಭ್ಯವಾಗಲಿದೆ. ತದನಂತರ ಉಳಿದ ನಗರಗಳಿಗೆ ವಿಮಾನ ಸಂಚಾರ ಆರಂಭವಾಗಲಿದೆ ಎಂದು ಸಂಸದರು ಮಾಹಿತಿ ತಿಳಿಸಿದ್ದಾರೆ.
ಈಗಾಗಲೇ ವಿಮಾನ ನಿಲ್ದಾಣ ಸಿಬ್ಬಂದಿಗಳಿಗೆ ತರಬೇತಿ ಕಾರ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ. ಏರ್’ಪೋರ್ಟ್ ಆಧಾರಿಟಿ ಆಫ್ ಇಂಡಿಯಾದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಅಂತಿಮ ಹಂತದ ಅನುಮತಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.