
ಹಣದಾಸೆಗೆ ಪರಿಚಯಸ್ಥನಿಂದಲೇ ನಡೆಯಿತೆ ಎಂಜಿನಿಯರ್ ಪತ್ನಿಯ ಹತ್ಯೆ? : ಹಂತಕರ ಬೆನ್ನು ಬಿದ್ದ ಪೊಲೀಸರು..!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಜೂ. 19: ಶಿವಮೊಗ್ಗದ ವಿಜಯನಗರದ ಗುತ್ಯಪ್ಪ ಕಾಲೋನಿ 2 ನೇ ತಿರುವಿನ ಮನೆಯೊಂದರಲ್ಲಿ ನಡೆದ, ಗೃಹಿಣಿ ಕಮಲಮ್ಮ (57) ಹತ್ಯೆ ಪ್ರಕರಣದ ತನಿಖೆಯನ್ನು ತುಂಗಾ ನಗರ ಠಾಣೆ ಪೊಲೀಸರು ಬಿರುಸುಗೊಳಿಸಿದ್ದಾರೆ. ಹಂತಕರ ಪತ್ತೆಗೆ ತೀವ್ರ ಶೋಧ ನಡೆಸಲಾರಂಭಿಸಿದ್ದಾರೆ.
ಜಿಲ್ಲಾ ಪೊಲೀಸ್ ಇಲಾಖೆಯು ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡಿದ್ದು, ಹಂತಕರ ಪತ್ತೆಗೆ ವಿಶೇಷ ತಂಡಗಳ ರಚನೆ ಮಾಡಿದೆ. ತುಂಗಾನಗರ ಠಾಣೆ ಇನ್ಸ್’ಪೆಕ್ಟರ್ ಮಂಜುನಾಥ್ ಬಿ ನೇತೃತ್ವದ ತಂಡವು, ಹಲವು ದಿಕ್ಕಿನಲ್ಲಿ ಪ್ರಕರಣದ ತನಿಖೆ ನಡೆಸಲಾರಂಭಿಸಿದೆ. ಈಗಾಗಲೇ ಹಂತಕರ ಜಾಡು ಪತ್ತೆ ಹಚ್ಚಿರುವ ತಂಡವು, ಇಷ್ಟರಲ್ಲಿಯೇ ಕೊಲೆಗಡುಕರ ಹೆಡೆಮುರಿ ಕಟ್ಟುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಹಂತಕರು ಕಮಲಮ್ಮ ಅವರ ಬಾಯಿಗೆ ಬಟ್ಟೆ ತುರುಕಿ, ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಪರಿಚಯಸ್ಥರಿಂದಲೇ ಕೃತ್ಯ ನಡೆದಿರುವ ಅನುಮಾನಗಳು ವ್ಯಕ್ತವಾಗುತ್ತಿವೆ. ಮತ್ತೊಂದೆಡೆ ಮನೆಯಲ್ಲಿದ್ದ ಸುಮಾರು 30 ಲಕ್ಷಕ್ಕೂ ಅಧಿಕ ಹಣ ನಾಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಏನಾಯ್ತು?: ಕೊಲೆಗೀಡಾದ ಕಮಲಮ್ಮರವರ ಪತಿ ಮಲ್ಲಿಕಾರ್ಜುನ್ ಅವರು, ನೀರಾವರಿ ಇಲಾಖೆಯಲ್ಲಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಮಗ ವಿದ್ಯಾಭ್ಯಾಸದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.
ಮಲ್ಲಿಕಾರ್ಜುನ್ ಅವರು ಸ್ನೇಹಿತರೊಂದಿಗೆ ಗೋವಾಕ್ಕೆ ಪ್ರವಾಸ ತೆರಳಿದ್ದರು. ಶನಿವಾರ ಸಂಜೆ ಅವರು ಪತ್ನಿ ಕಮಲಮ್ಮ ಅವರ ಮೊಬೈಲ್ ಪೋನ್’ಗೆ ಕರೆ ಮಾಡಿದ್ದು, ರಿಸೀವ್ ಆಗಿಲ್ಲ. ಅನುಮಾನದ ಮೇರೆಗೆ ನೆರೆಹೊರೆಯ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನರೆಹೊರೆಯವರು ತೆರಳಿದಾಗ, ಅಡುಗೆ ಮನೆಯಲ್ಲಿ ಕಮಲಮ್ಮರವರು ಮೃತಪಟ್ಟ ಸ್ಥಿತಿಯಲ್ಲಿರುವುದು ಗೊತ್ತಾಗಿದೆ.
ಶನಿವಾರ ರಾತ್ರಿಯೇ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ವಿವಿಧ ಮೂಲಗಳಿಂದ ಘಟನೆಯ ಮಾಹಿತಿ ಕಲೆ ಹಾಕಲಾರಂಭಿಸಿದ್ದಾರೆ. ಹಾಗೆಯೇ ಭಾನುವಾರ ದಾವಣಗೆರೆಯಿಂದ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರ ತಂಡವನ್ನು ಕರೆಯಿಸಿ ಮಾಹಿತಿ ಕಲೆ ಹಾಕಿಸಿದ್ದಾರೆ.
ಹಣದಾಸೆ?: ಕಮಲಮ್ಮ ಅವರು ಮನೆಯಲ್ಲಿ ಒಂಟಿಯಾಗಿರುವುದನ್ನು ತಿಳಿದುಕೊಂಡು, ಹಂತಕರು ಮನೆಗೆ ಆಗಮಿಸಿದ್ದಾರೆ. ಕುಟುಂಬಕ್ಕೆ ಪರಿಚಯವಿರುವವರೇ ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನಗಳು ವ್ಯಕ್ತವಾಗುತ್ತಿವೆ. ಮನೆಯಲ್ಲಿ ಲಕ್ಷಾಂತರ ರೂಪಾಯಿ ಹಣ ನಾಪತ್ತೆಯಾಗಿರುವುದರಿಂದ ಹಣಕ್ಕಾಗಿಯೇ ಈ ಹತ್ಯೆ ನಡೆದಿರುವುದು ಧೃಢವಾಗುತ್ತಿದೆ.
ಮತ್ತೊಂದೆಡೆ, ಇತ್ತೀಚೆಗೆ ಮಲ್ಲಿಕಾರ್ಜುನ್ ಅವರ ಬಳಿ ಹಣ ಕೇಳಿದ್ದ ವಾಹನ ಚಾಲಕನೋರ್ವ ಘಟನೆಯ ನಂತರ ಕಣ್ಮರೆಯಾಗಿದ್ದಾನೆ. ಆತನ ಮೊಬೈಲ್ ಪೋನ್ ಕೂಡ ಸ್ವಿಚ್ ಆಫ್ ಆಗಿದೆ. ಇದು ಕೂಡ ನಾನಾ ರೀತಿಯ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಒಟ್ಟಾರೆ ಒಂಟಿ ಮಹಿಳೆಯ ಹತ್ಯೆಯು ಸುತ್ತಮುತ್ತಲಿನ ನಿವಾಸಿಗಳಲ್ಲಿ ಭೀತಿಯ ವಾತಾವರಣ ಉಂಟು ಮಾಡಿದೆ. ಪೊಲೀಸರ ತನಿಖೆಯ ನಂತರವಷ್ಟೆ ಹಂತಕರು ಯಾರು? ಹತ್ಯೆಗೆ ಕಾರಣವೇನು? ಎಂಬಿತ್ಯಾದಿ ವಿವರಗಳು ತಿಳಿದಬರಬೇಕಾಗಿದೆ.