
ಶಿವಮೊಗ್ಗ ನಗರದಲ್ಲಿ ಭಾರೀ ಮಳೆ : ಮುಂಗಾರು ಮಳೆಯ ಭರ್ಜರಿ ಎಂಟ್ರಿ..!
ಶಿವಮೊಗ್ಗ, ಜೂ. 20: ಕೊನೆಗೂ ಮುಂಗಾರು ಮಳೆಯ ಭರ್ಜರಿ ಎಂಟ್ರಿಯಾಗಿದೆ..! ಹೌದು. ಶಿವಮೊಗ್ಗ ನಗರದಲ್ಲಿ ಮಂಗಳವಾರ ಮಧ್ಯಾಹ್ನ ಗುಡುಗು ಸಹಿತ ಭಾರೀ ವರ್ಷಧಾರೆಯಾಯಿತು. ಹಲವೆಡೆ ರಸ್ತೆ ಮೇಲೆಯೇ ಮಳೆ ನೀರು ಹರಿದು ಹೋಯಿತು. ಇದರಿಂದ ಜನ ವಾಹನ ಸಂಚಾರ ಅಸ್ತವ್ಯಸ್ತವಾಗುವಂತಾಗಿತ್ತು.

ಮಧ್ಯಾಹ್ನದವರೆಗೂ ಬಿಸಿಲ ಬೇಗೆ ಹೆಚ್ಚಿತ್ತು. ನಂತರ ಮೋಡ ಕವಿದ ವಾತಾವರಣ ಕಂಡುಬಂದಿತು. ಗುಡುಗು, ಬಿರುಗಾಳಿಯೊಂದಿಗೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಧಾರಾಕಾರ ಮಳೆಯಾಯಿತು.
ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ನಾಗರೀಕರಿಗೆ ಭಾರೀ ವರ್ಷಧಾರೆಯು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತು.

ಜಲಾವೃತ: ಚರಂಡಿ, ರಾಜಕಾಲುವೆಗಳ ಅವ್ಯವಸ್ಥೆಯಿಂದ ಹಲವೆಡೆ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದ ಕಾರಣದಿಂದ ರಸ್ತೆಗಳು ಜಲಮಯವಾಗುವಂತಾಗಿತ್ತು. ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಿರುವ ಪಿ ಎಲ್ ಡಿ ಬ್ಯಾಂಕ್ ರಸ್ತೆಯಲ್ಲಿ ಅಪಾರ ಪ್ರಮಾಣದ ನೀರು ರಸ್ತೆಯ ಮೇಲೆ ಹರಿಯುತ್ತಿದ್ದಿದ್ದು ಕಂಡುಬಂದಿತು. ದ್ವಿಚಕ್ರ ವಾಹನಗಳು ಜಲಮಯವಾಗಿದ್ದವು.

ಹಲವೆಡೆ ಚರಂಡಿ, ರಾಜಕಾಲುವೆ ನೀರು ಮನೆಗಳಿಗೆ ನುಗ್ಗಿದ ವರದಿಗಳು ಬಂದಿವೆ. ಅವ್ಯವಸ್ಥಿತ ಚರಂಡಿ, ರಾಜಕಾಲುವೆಗಳಿಂದ ಸಮಸ್ಯೆ ಉಲ್ಬಣಿಸುವಂತಾಗಿದೆ ಎಂದು ನಾಗರೀರು ದೂರುತ್ತಿದ್ದಾರೆ.
ಜಿಲ್ಲೆಯ ವಿವಿಧಡೆಯು ಚದುರಿದಂತೆ ವರ್ಷಧಾರೆಯಾಗಿರುವ ವರದಿಗಳು ಬಂದಿವೆ. ಜೂನ್ ತಿಂಗಳ ಮಧ್ಯಂತರ ಕಳೆದರೂ ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿರಲಿಲ್ಲ. ಇದರಿಂದ ಕೃಷಿ ಚಟುವಟಿಕೆ ಅಸ್ತವ್ಯಸ್ತಗೊಂಡಿತ್ತು. ಕುಡಿಯುವ ನೀರಿಗೂ ಹಾಹಾಕಾರ ಎದುರಾಗುವಂತೆ ಮಾಡಿತ್ತು. ಕೆರೆಕಟ್ಟೆ ಸೇರಿದಂತೆ ಪ್ರಮುಖ ಜಲಾಶಯಗಳ ನೀರಿನ ಸಂಗ್ರಹದಲ್ಲಿ ಕುಸಿತ ಕಂಡುಬಂದಿತ್ತು.
ತೀವ್ರ ಮಳೆ ಕೊರತೆಯಿಂದ ಬರದ ಕಾರ್ಮೋಡ ಕವಿಯುವಂತಾಗಿತ್ತು. ವಿಳಂಬವಾಗಿಯಾದರೂ ಇದೀಗ ಮಳೆ ಆರಂಭವಾಗಿರುವುದು ಮಳೆ ಕೊರತೆ ನೀಗುವುದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.