
ರಸ್ತೆಯಲ್ಲಿಯೇ ಶಿವಮೊಗ್ಗ ಪಾಲಿಕೆ ಮೇಯರ್’ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಸಾರ್ವಜನಿಕರು..!
ಶಿವಮೊಗ್ಗ, ಜೂ. 20: ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ಅವರನ್ನು, ಪಾಲಿಕೆ 5 ನೇ ವಾರ್ಡ್ ಪುರಲೆ ಬಡಾವಣೆ ನಿವಾಸಿಗಳು ಮಂಗಳವಾರ ರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ!
ಇದಕ್ಕೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ 15 ದಿನಗಳ ಹಿಂದೆ ಜಲ ಮಂಡಳಿ ಆಡಳಿತವು ಪುರಲೆ ಬಡಾವಣೆ ಮುಖ್ಯ ರಸ್ತೆಯಲ್ಲಿ, 24*7 ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಗುಂಡಿ ತೆಗೆದಿತ್ತು. ಆದರೆ ವಾರಗಳೇ ಕಳೆದರೂ ದುರಸ್ತಿ ಕಾರ್ಯ ನಡೆಸದೆ ಹಾಗೆಯೇ ಬಿಟ್ಟಿದೆ.

ಇದರಿಂದ ಜನ-ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಗುಂಡಿ ಮುಚ್ಚುವಂತೆ ನಾಗರೀಕರ ಮನವಿಗೂ ಆಡಳಿತ ಕ್ರಮಕೈಗೊಂಡಿರಲಿಲ್ಲ. ಮತ್ತೊಂದೆಡೆ, ವಾರ್ಡ್ ಕಾರ್ಪೋರೇಟರ್ ಆದ ಮೇಯರ್ ಶಿವಕುಮಾರ್ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಈ ನಡುವೆ ಮೇಯರ್ ಶಿವಕುಮಾರ್ ಮಂಗಳವಾರ ಬೆಳಿಗ್ಗೆ ಸ್ಥಳಕ್ಕಾಗಮಿಸಿದ್ದು, ಈ ವೇಳೆ ಆಕ್ರೋಶಭರಿತ ಕೆಲ ನಾಗರೀಕರು ಮೇಯರ್ ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವರು ಏಕವಚನದಲ್ಲಿಯೇ ಮಾತನಾಡಿದ್ದಾರೆ. ತದನಂತರ ಸ್ಥಳದಿಂದ ಮೇಯರ್ ತೆರಳಿದ್ದು, ಆಕ್ರೋಶಭರಿತ ನಾಗರೀಕರೇ ಗುಂಡಿಯನ್ನು ಮುಚ್ಚಿದ ಘಟನೆಯೂ ಕೂಡ ನಡೆದಿದೆ.
ಬಿಜೆಪಿ ಕಾರ್ಯಕರ್ತರಿಂದಲೇ ತರಾಟೆ!

*** ಮೇಯರ್ ಶಿವಕುಮಾರ್ ಅವರು ಪುರಲೆ ಬಡಾವಣೆಯಲ್ಲಿ ಸ್ವಪಕ್ಷೀಯ ಬಿಜೆಪಿ ಮುಖಂಡರು, ಕಾರ್ಯಕರ್ತರಿಂದಲೇ ತರಾಟೆಗೊಳಾಗಿದ್ದಾರೆ! ಆಕ್ರೋಶಭರಿತ ಪಕ್ಷದ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮೇಯರ್ ಹರಸಾಹಸ ನಡೆಸುವಂತಾಗಿತ್ತು. ತಕ್ಷಣವೇ ಅವ್ಯವಸ್ಥೆ ಸರಿಪಡಿಸುವಂತೆ ಮುಖಂಡರು ಮೇಯರ್ ಗೆ ತಾಕೀತು ಮಾಡಿದ್ದಾರೆ.