
ಸಕ್ರೆಬೈಲು ಆನೆ ಬಿಡಾರದಲ್ಲಿ ಪ್ರವಾಸಿಗಳ ಜೊತೆ ಸಿಬ್ಬಂದಿಯ ಅನುಚಿತ ವರ್ತನೆ! : ಗಮನಹರಿಸುವುದೆ ಅರಣ್ಯ ಇಲಾಖೆ?
ಶಿವಮೊಗ್ಗ, ಜೂ. 22: ಶಿವಮೊಗ್ಗ ತಾಲೂಕಿನ ಸಕ್ರೆಬೈಲು ಆನೆ ಬಿಡಾರದಲ್ಲಿನ ಸಿಬ್ಬಂದಿಯೋರ್ವರು, ಪ್ರವಾಸಿಗರ ಜೊತೆ ಅನುಚಿತವಾಗಿ ವರ್ತಿಸಿದ ಘಟನೆಯೊಂದು ಗುರುವಾರ ನಡೆದಿದೆ.
ಹುಬ್ಬಳ್ಳಿಯಿಂದ ಆಗಮಿಸಿದ್ದ ಪ್ರವಾಸಿಗರ ಜೊತೆ, ಬಿಡಾರದ ಸಿಬ್ಬಂದಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿ ಕೂಗಾಡಿದ್ದಾನೆ. ಮಹಿಳೆಯರ ಜೊತೆ ಮಾತಿನ ಚಕಮಕಿ ನಡೆಸಿದ್ದಾನೆ.
ಈ ಕುರಿತಂತೆ ಪ್ರವಾಸಿಗರು ಬಿಡಾರದಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಅವರ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಅಧಿಕಾರಿಯು ಸದರಿ ಸಿಬ್ಬಂದಿಗೆ, ಪ್ರವಾಸಿಗಳ ಜೊತೆ ಸೌಜನ್ಯದಿಂದ ನಡೆದುಕೊಳ್ಳುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
‘ಶೃಂಗೇರಿಗೆ ತೆರಳುವ ಮಾರ್ಗಮಧ್ಯೆ ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಲಾಗಿತ್ತು. ಈ ವೇಳೆ ಯಾವುದೇ ಕಾರಣವಿಲ್ಲದೆ ಸಿಬ್ಬಂದಿಯು ನಮ್ಮ ಕುಟುಂಬದ ಮಹಿಳೆಯರೊಂದಿಗೆ ಜಗಳ ಮಾಡಿದರು. ಸಿಬ್ಬಂದಿಯ ವರ್ತನೆ ಬೇಸರ ಉಂಟು ಮಾಡಿತು. ಪ್ರವಾಸಿ ತಾಣಗಳಲ್ಲಿ ಈ ರೀತಿಯ ಘಟನೆಗಳಿಗೆ ಆಸ್ಪದವಾಗದಂತೆ ಸಂಬಂಧಿಸಿದವರು ಎಚ್ಚರವಹಿಸಬೇಕು. ಪ್ರವಾಸಿಗರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸಿಬ್ಬಂದಿಗಳಿಗೆ ಸಲಹೆ ನೀಡಬೇಕು’ ಎಂದು ಪ್ರವಾಸಿಗರು ತಿಳಿಸಿದ್ದಾರೆ.