
ರೈಲ್ವೆ ಅಂಡರ್ ಪಾಸ್ ಕಾಮಗಾರಿ ಪೂರ್ಣವಾಗೋದು ಯಾವಾಗ?!
ಆರಂಭದಲ್ಲಿ ಸಮರೋಪಾದಿ ನಂತರ ಆಮೆ ವೇಗ..!!
ಶಿವಮೊಗ್ಗ, ಜೂ. 23: ಶಿವಮೊಗ್ಗ ನಗರದ ವೀರಣ್ಣನ ಲೇ ಔಟ್ ಬಳಿ ನಡೆಸಲಾಗುತ್ತಿರುವ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿದೆ. ವರ್ಷಗಳೇ ಉರುಳಿದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಕಾಮಗಾರಿಗೆ ಚಾಲನೆ ನೀಡಿದ್ದ ಸಂದರ್ಭದಲ್ಲಿ ಏಳೆಂಟು ತಿಂಗಳಲ್ಲಿ ಅಂಡರ್ ಪಾಸ್ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಲಾಗಿತ್ತು. ಪ್ರಾರಂಭದಲ್ಲಿ ಸಮರೋಪಾದಿಯಲ್ಲಿ ಕಾಮಗಾರಿ ನಡೆಯುತ್ತಿತ್ತು.
ರೈಲ್ವೆ ಹಳಿ ಕೆಳಭಾಗದಲ್ಲಿ ಮಾರ್ಗ ನಿರ್ಮಾಣವೂ ಪೂರ್ಣಗೊಂಡಿತ್ತು. ಮತ್ತೊಂದು ಬದಿಯಲ್ಲಿ ತಡೆಗೋಡೆ, ರಸ್ತೆ ನಿರ್ಮಾಣ ಕಾರ್ಯ ಕೂಡ ನಡೆಸಲಾಗಿತ್ತು. ಆದರೆ ವೀರಣ್ಣನ ಲೇಔಟ್ ಬದಿಯಲ್ಲಿ ಮಾರ್ಗ ನಿರ್ಮಾಣ, ತಡೆಗೋಡೆ ನಿರ್ಮಾಣ ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.

ಸ್ಥಳದಲ್ಲಿ ಬಂಡೆ ಕಲ್ಲುಗಳು ಸಿಕ್ಕಿರುವುದರಿಂದ ಕಾಮಗಾರಿಗೆ ಅಡೆತಡೆ ಎದುರಾಗಿದೆ. ಈ ಕಾರಣದಿಂದ ಕಳೆದ ಹಲವು ತಿಂಗಳುಗಳಿಂದ ವಿಳಂಬಗತಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಇನ್ನಾದರೂ ರೈಲ್ವೆ ಇಲಾಖೆ ಅಂಡರ್ ಪಾಸ್ ಕಾಮಗಾರಿ ಬಿರುಸುಗೊಳಿಸಬೇಕು. ಕಾಲಮಿತಿಯೊಳಗೆ ಕೆಲಸ ಪೂರ್ಣಗೊಳಿಸಬೇಕು. ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸುತ್ತಾರೆ.
ಕಾಮಗಾರಿಗೆ ಚಾಲನೆ ನೀಡಿದ್ದ ಸಂಸದರು
ಸೂರ್ಯ ಲೇಔಟ್, ಪಿ ಅಂಡ್ ಟಿ ಕಾಲೋನಿ, ಅರವಿಂದ ನಗರ, ಕನಕ ನಗರ, ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು ಮಾನವ ರಹಿತ ರೈಲ್ವೆ ಲೆವೆಲ್ ಕ್ರಾಸಿಂಗ್ ಮೂಲಕ ಸಂಚರಿಸುತ್ತಿದ್ದರು. ರೈಲ್ವೆ ಹಳಿ ಬಳಿ ಅಪಘಾತಗಳು ಸಂಭವಿಸಿದ್ದವು.

ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಸದರಿ ರಸ್ತೆ ಬಂದ್ ಮಾಡಿತ್ತು. ರೈಲ್ವೆ ಹಳಿಯ ಇಕ್ಕೆಲಗಳಲ್ಲಿ ತಡೆಗೋಡೆ ಹಾಕಿತ್ತು. ಇದರಿಂದ ಸ್ಥಳೀಯ ನಿವಾಸಿಗಳು ಸದರಿ ಸ್ಥಳದಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದರು. ಈ ಸಂಬಂಧ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಮಾಡಿಕೊಂಡಿದ್ದರು. ನಾಗರೀಕರ ಮನವಿಗೆ ಸ್ಪಂದಿಸಿದ ಸಂಸದರು, ಅಂಡರ್ ಪಾಸ್ ಕಾಮಗಾರಿ ಮಂಜೂರು ಮಾಡಿಸಿದ್ದರು. ಕಾಮಗಾರಿಗೂ ಕೂಡ ಚಾಲನೆ ನೀಡಿದ್ದರು.