
ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಕಾಲಮಿತಿಯೊಳಗೆ ಕ್ರಮ : ಶಿವಮೊಗ್ಗ ಜಿಪಂ ಸಿಇಓ
ಶಿವಮೊಗ್ಗ, ಜೂ. 23: ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ, ಶಿವಮೊಗ್ಗ ತಾಲೂಕು ಕೊನಗವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೇವಾಲಾಲ್ ನಗರ ನಿವಾಸಿಗಳು, ಶುಕ್ರವಾರ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ಅವರಿಗೆ ಮನವಿ ಪತ್ರ ಅರ್ಪಿಸಿದರು.
ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಯಾಗುವ ಬೋರ್’ವೆಲ್ ನಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದ ಕಳೆದ ಕೆಲ ದಿನಗಳಿಂದ ಕುಡಿಯುವ ನೀರು ಪೂರೈಕೆಯಲ್ಲಿ ತೀವ್ರ ವ್ಯತ್ಯಯವಾಗಿವೆ. ತುರ್ತಾಗಿ ಹೊಸದಾಗಿ ಬೋರ್’ವೆಲ್ ಕೊರೆಯಿಸುವ ಅಗತ್ಯವಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.
ಮನವಿ ಸ್ವೀಕರಿಸಿದ ನಂತರ ಸಿಇಓ ಅವರು ಮಾತನಾಡಿ, ಕಾಲಮಿತಿಯೊಳಗೆ ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು. ಈ ಸಂಬಂಧ ಗ್ರಾಮ ಪಂಚಾಯ್ತಿ ಪಿಡಿಓ ಜೊತೆ ಸಮಾಲೋಚಿಸಲಾಗುವುದು. ತಕ್ಷಣವೇ ಅಗತ್ಯವಿರುವ ಎಲ್ಲ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮನವಿ ಅರ್ಪಿಸುವ ಸಂದರ್ಭದಲ್ಲಿ ಸೇವಾಲಾಲ್ ನಗರದ ನಿವಾಸಿಗಳಾದ ಗೋಪಿನಾಯ್ಕ್, ಕುಮಾರನಾಯ್ಕ್ ಇತರರು ಉಪಸ್ಥಿತರಿದ್ದರು.