
ಬಕ್ರೀದ್ ಹಬ್ಬ : ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಶಾಂತಿ ಸಮಿತಿ ಸಭೆ
ಶಿವಮೊಗ್ಗ, ಜೂ. 23: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಡಿಎಆರ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಶಾಂತಿ ಸಮಿತಿ ಸಭೆ ಆಯೋಜಿಸಲಾಗಿತ್ತು.
ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಮಾತನಾಡಿ, ‘ಸಮಾಜದಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿ ಪ್ರತಿಯೋರ್ವ ನಾಗರೀಕರದ್ದಾಗಿದೆ. ಎಲ್ಲ ಧರ್ಮದ ಹಬ್ಬ ಮತ್ತು ಆಚರಣೆಗಳಿಗೆ ಅದರದೇ ಆದ ಪ್ರಾಮುಖ್ಯತೆಯಿದೆ. ಅರ್ಥಪೂರ್ಣವಾಗಿ, ಶಾಂತಿಯುತವಾಗಿ ಮತ್ತು ಸಮನ್ವಯತೆಯಿಂದ ಹಬ್ಬ ಆಚರಣೆ ಮಾಡಬೇಕು’ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲ ತಾಣಗಳಲ್ಲಿ ಯಾವುದೇ ಆಕ್ಷೇಪಾರ್ಹ ವೀಡಿಯೋ / ಫೋಟೋಗಳನ್ನು ಅಪ್ ಲೋಡ್ ಮಾಡುವುದು, ಹರಿಬಿಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ರೀತಿಯ ಕೃತ್ಯಗಳನ್ನು ಎಸಗುವವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸುಳ್ಳು ಸುದ್ದಿ ಹಬ್ಬಿಸುವ ಮುಖಾಂತರ ಸೌಹಾರ್ದತೆಗೆ ಭಂಗ ತಂದು ಸಮಸ್ಯೆಗಳನ್ನುಂಟು ಮಾಡುವಂತಹ ಯಾವುದೇ ಘಟನೆಗಳು ಕಂಡುಬಂದಲ್ಲಿ, ಕೂಡಲೇ ಹತ್ತಿರದ ಪೊಲೀಸ್ ಠಾಣೆ / ತುರ್ತು ಸಹಾಯವಾಣಿ –ERSS – 112 ಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬೇಕು.

ಸಮಾಜದಲ್ಲಿ ಶಾಂತಿ ಕಾಪಾಡುವುದೇ ಪೊಲೀಸ್ ಇಲಾಖೆಯ ಪ್ರಮುಖ ಕರ್ತವ್ಯವಾಗಿದೆ. ಸಮಾಜದ ಸ್ವಾಸ್ಥ್ಯ ಮತ್ತು ಸೌಹಾರ್ದತೆಗೆ ಭಂಗ ತರುವಂತಹ ಯಾವುದೇ ಕೃತ್ಯವೆಸಗುವ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
ಹಬ್ಬದ ಆಚರಣೆ ಮತ್ತು ಪ್ರಾರ್ಥನೆಯ ಸಂದರ್ಭದಲ್ಲಿ ಪೊಲೀಸ್ ಇಲಾಖಾವತಿಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಿದ್ದು, ಎಲ್ಲರೂ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡುವಂತೆ ಎಸ್ಪಿ ಮನವಿ ಮಾಡಿದ್ದಾರೆ.
ಸಭೆಯಲ್ಲಿ ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಪ್ರೊಬೇಷನರಿ ಐಪಿಎಸ್ ಅಧಿಕಾರಿ ಕು. ಬಿಂದುಮಣಿ, ಡಿವೈಎಸ್ಪಿಗಳಾದ ಬಾಲರಾಜ್, ಸುರೇಶ್, ಇನ್ಸ್’ಪೆಕ್ಟರ್ ಗಳಾದ ಅಂಜನ್ ಕುಮಾರ್, ಮಾದಪ್ಪ, ಹರೀಶ್ ಪಾಟೀಲ್ ಮೊದಲಾದವರಿದ್ದರು.