
ಕಾರ್ಪೋರೇಟರ್’ಗಳ ಆರೋಗ್ಯ ಭತ್ಯೆಗೆ ಬ್ರೇಕ್ : ಎಂಜಿನಿಯರ್ ಗಳಿಗೆ ತಲಾ 25 ಸಾವಿರ ರೂ. ದಂಡ – ಶಿವಮೊಗ್ಗ ಪಾಲಿಕೆ ಆಯುಕ್ತರ ಖಡಕ್ ಕ್ರಮ!!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಜೂ. 29: ‘ಕಾರ್ಪೋರೇಟರ್ ಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವೇಳೆ ಪಾಲಿಕೆ ನಿಧಿಯಿಂದ ಪಡೆಯಬಹುದಾಗಿದ್ದ ಚಿಕಿತ್ಸಾ ವೆಚ್ಚಕ್ಕೆ ತಡೆ… ಬಹುಮಹಡಿ ಕಟ್ಟಡ ನಿರ್ಮಾಣದ ವೇಳೆ ಸೆಟ್ ಬ್ಯಾಕ್ ನಿಯಮ ಉಲ್ಲಂಘನೆಯಾದರೂ ಕ್ರಮಕೈಗೊಳ್ಳದ ಪಾಲಿಕೆ ಎಂಜಿನಿಯರ್ ಗಳಿಗೆ ತಲಾ 25 ಸಾವಿರ ರೂ. ದಂಡ..!’
ಇದು, ಶಿವಮೊಗ್ಗ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು ಇತ್ತೀಚೆಗೆ ಕೈಗೊಂಡಿರುವ ಎರಡು ಮಹತ್ತರ ಕ್ರಮಗಳ ಪ್ರಮುಖಾಂಶಗಳು..! ಆಯುಕ್ತರ ಖಡಕ್ ಆದೇಶ ಸದ್ಯ ಪಾಲಿಕೆ ಆಡಳಿತ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಬಿಸಿ ಬಿಸಿ ಚರ್ಚೆಗೆಡೆ ಮಾಡಿಕೊಟ್ಟಿದೆ.
ಚಿಕಿತ್ಸಾ ವೆಚ್ಚ ಪಡೆಯುವುದರ ಮೇಲೆ ನಿರ್ಬಂಧ!
ಕಾರ್ಪೋರೇಟರ್ ಗಳು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ವೇಳೆ, ಪಾಲಿಕೆ ನಿಧಿಯಿಂದ ಚಿಕಿತ್ಸಾ ವೆಚ್ಚ ಪಡೆಯುವ ಅವಕಾಶವಿತ್ತು. ಈ ಹಿಂದೆ ಸಾಕಷ್ಟು ಕಾರ್ಪೋರೇಟರ್ ಗಳು ಲಕ್ಷಾಂತರ ರೂ. ಚಿಕಿತ್ಸಾ ವೆಚ್ಚ ಪಡೆದುಕೊಂಡಿದ್ದಾರೆ.
ಆದರೆ ಚಿಕಿತ್ಸಾ ವೆಚ್ಚ ಪಡೆದುಕೊಳ್ಳಲು ನಗರಾಭಿವೃದ್ದಿ ಇಲಾಖೆ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಚಿಕಿತ್ಸಾ ವೆಚ್ಚ ಪಡೆದುಕೊಳ್ಳುವ ಪದ್ದತಿ ಹಲವು ವರ್ಷಗಳಿಂದ ಅನೂಚಾನವಾಗಿ ನಡೆದುಕೊಂಡು ಬಂದಿತ್ತು.
ಕಳೆದ ಕೆಲ ತಿಂಗಳುಗಳ ಹಿಂದೆ, ಕಾರ್ಪೋರೇಟರ್ ಓರ್ವರು ಚಿಕಿತ್ಸಾ ವೆಚ್ಚ ಕೋರಿ ಪಾಲಿಕೆ ಆಡಳಿತಕ್ಕೆ ಮನವಿ ಮಾಡಿದ್ದರು. ಕೌನ್ಸಿಲ್ ಸಭೆಯಲ್ಲಿಯೂ ನಿರ್ಣಯ ಬಂದಿತ್ತು. ಈ ಕುರಿತಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗಿತ್ತು. ಈ ಹಿನ್ನಲೆಯಲ್ಲಿ ಆಯುಕ್ತ ಮಾಯಣ್ಣಗೌಡ ಅವರು ನಿಯಮಾನುಸಾರ ವೆಚ್ಚ ಭರಿಸದಿರುವ ನಿರ್ಣಯ ಕೈಗೊಂಡಿದ್ದರು.
ಇದಾದ ನಂತರವೂ ಮತ್ತೆ ಮೂವರು ಕಾರ್ಪೋರೇಟರ್ ಗಳು ಚಿಕಿತ್ಸಾ ವೆಚ್ಚ ಕೋರಿ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು. ಈ ಎಲ್ಲ ಅರ್ಜಿಗಳನ್ನು ಆಯುಕ್ತರು ತಿರಸ್ಕರಿಸಿ, ಕಾನೂನಿನಲ್ಲಿ ಚಿಕಿತ್ಸಾ ವೆಚ್ಚ ಭರಿಸಲು ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಆದೇಶ ಹೊರಡಿಸಿದ್ದರು. ಆಯುಕ್ತರ ಈ ಕ್ರಮವು ಕೆಲ ಕಾರ್ಪೋರೇಟರ್ ಗಳ ಕೆಂಗಣ್ಣಿಗೆ ಗುರಿಯಾಗಿತ್ತು.
10 ಎಂಜಿನಿಯರ್ ಗಳ ವಿರುದ್ದ ದಂಡಾಸ್ತ್ರ..!
ಶಿವಮೊಗ್ಗ ನಗರದಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣದ ವೇಳೆ ಸೆಟ್ ಬ್ಯಾಕ್ ಉಲ್ಲಂಘನೆ ಸರ್ವೇ ಸಾಮಾನ್ಯ ಎಂಬ ಮಾತುಗಳು ಹಲವು ದಶಕಗಳಿಂದ ಕೇಳಿಬರುತ್ತಿದೆ. ವಾಹನಗಳ ನಿಲುಗಡೆ ಕಡ್ಡಾಯವಾಗಿ ಮೀಸಲಿಡಬೇಕಾದ ಜಾಗವನ್ನು ಕೂಡ ಕಟ್ಟಡ ಮಾಲೀಕರು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವ ಗಂಭೀರ ಆರೋಪಗಳಿವೆ.
ಬಹು ಮಹಡಿ ಕಟ್ಟಡಗಳಲ್ಲಿನ ಸೆಟ್ ಬ್ಯಾಕ್ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಆಯುಕ್ತರು, ಸಂಬಂಧಿಸಿದ ಎಂಜಿನಿಯರ್ ಗಳನ್ನೇ ಹೊಣೆಗಾರರನ್ನಾಗಿ ಮಾಡಿದ್ದಾರೆ. ಕರ್ತವ್ಯ ನಿರ್ವಹಣೆ ಮಾಡುವಲ್ಲಿ ವಿಫಲವಾಗಿರುವ ಆರೋಪದ ಮೇರೆಗೆ 10 ಎಂಜಿನಿಯರ್ ಗಳಿಗೆ ತಲಾ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ!
ಬಹು ಮಹಡಿ ಕಟ್ಟಡಗಳ ನಿರ್ಮಾಣ ಹಂತದ ವೇಳೆ ಸೆಟ್ ಬ್ಯಾಕ್ ನಿಯಮ ಉಲ್ಲಂಘನೆಯಾಗುತ್ತಿದ್ದರೂ ಕ್ರಮಕೈಗೊಳ್ಳದ ಎಇಇ (ಸಹಾಯಕ ಕಾರ್ಯಪಾಲಕ ಅಭಿಯಂತರ), ಎಇ (ಸಹಾಯಕ ಅಭಿಯಂತರ) ಹಾಗೂ ಜೆಇ (ಕಿರಿಯ ಅಭಿಯಂತರ) ಗಳ ವಿರುದ್ದ ನಗರಾಭಿವೃದ್ದಿ ನಿಯಮದ ಅನುಸಾರ ದಂಡಾಸ್ತ್ರ ಪ್ರಯೋಗ ಮಾಡಿದ್ದಾರೆ.
ಎಂಜಿನಿಯರ್ ಗಳ ವಿರುದ್ದ ದಂಡಾಸ್ತ್ರದ ಪ್ರಯೋಗವಾಗುತ್ತಿದ್ದಂತೆ, ಎಚ್ಚೆತ್ತುಕೊಂಡಿರುವ ಪಾಲಿಕೆಯ ಇತರೆ ಅಧಿಕಾರಿ – ಸಿಬ್ಬಂದಿಗಳು ನಿಯಮಾನಸಾರ ತಮ್ಮ ಕರ್ತವ್ಯ, ನಿರ್ವಹಣೆ ಮಾಡಲಾರಂಭಿಸಿದ್ದಾರೆ. ಜೊತೆಗೆ ಸೆಟ್ ಬ್ಯಾಕ್ ನಿಯಮ ಪಾಲಿಸದ ಕಟ್ಟಡಗಳ ಮಾಲೀಕರಿಗೆ ನೋಟೀಸ್ ನೀಡಲಾರಂಭಿಸಿರುವ ಮಾಹಿತಿಗಳು ಕೇಳಿಬರಲಾರಂಭಿಸಿವೆ.
ಒಟ್ಟಾರೆ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರು ಸದ್ದುಗದ್ದಲವಿಲ್ಲದೆ ಕೈಗೊಂಡಿರುವ ಖಡಕ್ ಆಡಳಿತಾತ್ಮಕ ಕ್ರಮಗಳು ಪಾಲಿಕೆ ವಲಯದಲ್ಲಿ ಭಾರೀ ಚರ್ಚೆಗೆಡೆ ಮಾಡಿಕೊಟ್ಟಿದೆ. ಮತ್ತೊಂದೆಡೆ, ಪ್ರಜ್ಞಾವಂತ ನಾಗರೀಕರ ಮೆಚ್ಚುಗೆಗೆ ಪಾತ್ರವಾಗಿದೆ.