
ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಶಿವಮೊಗ್ಗ ಎಸ್ಪಿ!
ಶಿರಾಳಕೊಪ್ಪ (ಶಿಕಾರಿಪುರ), ಜೂ. 29: ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು, ಬೃಹತ್ ರಕ್ತದಾನ ಶಿಬಿರವನ್ನು ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ.
ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪಟ್ಟಣದ ವಾಲ್ಮೀಕಿ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ಫೂರ್ತಿ ಫೌಂಡೇಷನ್ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಎಸ್ಪಿ ರಕ್ತದಾನ ಮಾಡಿದರು.
ನಂತರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿ, ‘ರಕ್ತದಾನವು ಶ್ರೇಷ್ಠ ದಾನವಾಗಿದೆ. ರಕ್ತಕ್ಕೆ ಬದಲಿ ವ್ಯವಸ್ಥೆಯಿಲ್ಲ. ಶಿರಾಳಕೊಪ್ಪದಂತಹ ಚಿಕ್ಕ ಪಟ್ಟಣದಲ್ಲಿ ಇಷ್ಟೊಂದು ಸಂಘ-ಸಂಸ್ಥೆಗಳು ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇಂತಹ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂದು’ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ಪೂರ್ತಿ ಫೌಂಡೇಷನ್ ಸಂಸ್ಥೆಯ ಅಧ್ಯಕ್ಷ ಹಂಸರಾಜ್ ಜೈನ್, ಗೌರವಾಧ್ಯಕ್ಷ ಡಾ.ಪ್ರಭು ಸಾಹುಕಾರ್, ಶಿಕಾರಿಪುರ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಶಿವಾನಂದ ಮದರಕಂಡಿ, ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಯೋಗಿ ಗೌಡ ಸೇರಿದಂತೆ ಮೊದಲಾದವರಿದ್ದರು.
ಸದರಿ ರಕ್ತದಾನ ಶಿಬಿರದಲ್ಲಿ ಶಾಲಾ ಕಾಲೇಜಿನ ವಿಧ್ಯಾರ್ಥಿಗಳು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು, ಸಾರ್ವಜನಿಕರು ಸೇರಿದಂತೆ 200 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.