
ಆರೋಗ್ಯ ಭತ್ಯೆ – ಪಾಲಿಕೆ ವ್ಯಾಪ್ತಿ ವಿಸ್ತರಣೆ : ಹಾಲಿ, ಮಾಜಿ ಕಾರ್ಪೋರೇಟರ್ ಗಳ ಅಭಿಪ್ರಾಯವೇನು?
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಜೂ. 30: ಕಾರ್ಪೋರೇಟರ್ ಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವೇಳೆ, ಪಾಲಿಕೆಯಿಂದ ಚಿಕಿತ್ಸಾ ವೆಚ್ಚ ಪಡೆದುಕೊಳ್ಳುವ ವ್ಯವಸ್ಥೆಗೆ ಶಿವಮೊಗ್ಗ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು ತಡೆ ಹಾಕಿದ್ದಾರೆ. ಆರೋಗ್ಯ ಭತ್ಯೆ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.

ಕಾರ್ಪೋರೇಟರ್ ಗಳಿಗೆ ಆರೋಗ್ಯ ಭತ್ಯೆ ನೀಡುವ ವಿಷಯದ ಕುರಿತಂತೆ ಹಾಲಿ ಕಾರ್ಪೋರೇಟರ್ ಬಿ.ಎ.ರಮೇಶ್ ಹೆಗ್ಡೆ ಹಾಗೂ ಮಾಜಿ ಕಾರ್ಪೋರೇಟರ್ ಐಡಿಯಲ್ ಗೋಪಿ ಅವರು ತದ್ವಿರುದ್ದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಎಂಪಿ – ಎಂಎಲ್ಎ ಗಳ ರೀತಿ ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಆರೋಗ್ಯ ಭತ್ಯೆ ಕಲ್ಪಿಸಬೇಕು’ ಎಂದು ಹಾಲಿ ಸದಸ್ಯ ಬಿ.ಎ.ರಮೇಶ್ ಹೆಗ್ಡೆ ಹೇಳಿದ್ದಾರೆ. ‘ಯಾವುದೇ ಕಾರಣಕ್ಕೂ ಆರೋಗ್ಯ ಭತ್ಯೆ ಕಲ್ಪಿಸಬಾರದು. ನಾಗರೀಕರ ತೆರಿಗೆ ಹಣ ಸದ್ಭಳಕೆಯಾಗಬೇಕು. ಈಗಾಗಲೇ ಪಾವತಿಸಿರುವ ಆರೋಗ್ಯ ಭತ್ಯೆ ವಸೂಲಿ ಮಾಡಬೇಕು’ ಎಂದು ಮಾಜಿ ಸದಸ್ಯ ಐಡಿಯಲ್ ಗೋಪಿ ತಿಳಿಸುತ್ತಾರೆ.
ಮತ್ತೊಂದೆಡೆ, ಶಿವಮೊಗ್ಗ ಪಾಲಿಕೆ ವ್ಯಾಪ್ತಿ ವಿಸ್ತರಣೆ ಹಾಗೂ ವಾರ್ಡ್ ಗಳ ಸಂಖ್ಯೆ ಹೆಚ್ಚಳದ ಕುರಿತಂತೆ ಈ ಇಬ್ಬರು ನಾಯಕರು ಒಮ್ಮತಾಭಿಪ್ರಾಯ ವ್ಯಕ್ತಪಡಿಸುತ್ತಾರೆ. ಜನಸಂಖ್ಯೆ, ನಗರದ ಬೆಳವಣಿಗೆಗೆ ಅನುಗುಣವಾಗಿ ನಗರ ವ್ಯಾಪ್ತಿ ವಿಸ್ತರಣೆಯಾಗಬೇಕು. ವಾರ್ಡ್ ಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಅಭಿಪ್ರಾಯಪಡುತ್ತಾರೆ. ಈ ಇಬ್ಬರು ನಾಯಕರು ವ್ಯಕ್ತಪಡಿಸಿದ ಅಭಿಪ್ರಾಯದ ಸಾರಾಂಶ ಮುಂದಿನಂತಿದೆ.
‘ಎಂಪಿ, ಎಂಎಲ್ಎಗಳ ರೀತಿ ಆರೋಗ್ಯ ಭತ್ಯೆ ಕಲ್ಪಿಸಬೇಕು’ : ಕಾರ್ಪೋರೇಟರ್ ಬಿ.ಎ.ರಮೇಶ್ ಹೆಗ್ಡೆ
*** ‘ಸಂಸದರು, ಶಾಸಕರಿಗಿರುವ ರೀತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೂ ಆರೋಗ್ಯ ಭತ್ಯೆ ಕಲ್ಪಿಸಬೇಕು’ ಎಂದು ಮಹಾನಗರ ಪಾಲಿಕೆ ಕಾರ್ಪೋರೇಟರ್ ಬಿ.ಎ.ರಮೇಶ್ ಹೆಗ್ಡೆ ಅವರು ಅಭಿಪ್ರಾಯಪಟ್ಟಿದ್ದಾರೆ.
‘ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಕೂಡ ಜನ ಸೇವಕರಾಗಿದ್ದಾರೆ. ಆರೋಗ್ಯ ಭತ್ಯೆ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಆದೇಶ, ಸುತ್ತೋಲೆಗಳನ್ನು ಹೊರಡಿಸಬೇಕಾಗಿದೆ’ ಎಂದು ಹೇಳಿದ್ದಾರೆ.

ಆರೋಗ್ಯ ಭತ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಸಂಸದರು, ಶಾಸಕರಿಗಿರುವ ನೀತಿಯನ್ನು ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೂ ಅನ್ವಯ ಮಾಡಬೇಕು ಎಂಬುವುದು ತಮ್ಮ ಅಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿ ವಿಸ್ತರಣೆ: ನಗರದ ಬೆಳವಣಿಗೆ ಹಾಗೂ ಜನಸಂಖ್ಯೆಗೆ ಅನುಗುಣವಾಗಿ, ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ವಿಸ್ತರಣೆ ಹಾಗೂ ವಾರ್ಡ್ ಗಳ ಸಂಖ್ಯೆ ಹೆಚ್ಚಳವಾಗಬೇಕಾಗಿದೆ. ಈ ಮೂಲಕ ಯೋಜನಾಬದ್ದ ನಗರ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
ನಗರದ ಹೊರವಲಯದ ಪ್ರದೇಶಗಳಲ್ಲಿ ಹೊಸ ಹೊಸ ಬಡಾವಣೆಗಳು ಅಭಿವೃದ್ದಿಯಾಗಿವೆ. ಇಂತಹ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಬೇಕು. ಇದರಿಂದ ಸದರಿ ಬಡಾವಣೆಗಳಿಗೆ ಸಮರ್ಪಕ ಮೂಲಸೌಕರ್ಯ ಲಭ್ಯವಾಗಲಿದೆ. ಜೊತೆಗೆ ಪಾಲಿಕೆ ಆಡಳಿತಕ್ಕೂ ಆದಾಯ ಸಂಗ್ರಹಣೆ ಹೆಚ್ಚಾಗಲಿದೆ.
ಹಾಗೆಯೇ ವಾರ್ಡ್ ಗಳ ಸಂಖ್ಯೆ ಕೂಡ ಹೆಚ್ಚಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ನಿಯಮಾನುಸಾರ ಹಾಗೂ ವೈಜ್ಞಾನಿಕವಾಗಿ ನಗರ ವ್ಯಾಪ್ತಿ ಮತ್ತು ವಾರ್ಡ್ ಗಳ ಸಂಖ್ಯೆ ಹೆಚ್ಚಳಕ್ಕೆ ಕ್ರಮಕೈಗೊಳ್ಳಬೇಕಾಗಿದೆ ಎಂದು ಬಿ.ಎ.ರಮೇಶ್ ಹೆಗ್ಡೆ ಅವರು ಅಭಿಪ್ರಾಯಪಡುತ್ತಾರೆ.
‘ನಾಗರೀಕರ ತೆರಿಗೆ ಹಣ ಬಳಕೆ ಸರಿಯಲ್ಲ’ : ಮಾಜಿ ಕಾರ್ಪೋರೇಟರ್ ಐಡಿಯಲ್ ಗೋಪಿ
*** ‘ಕಾರ್ಪೋರೇಟರ್ ಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವೇಳೆ, ಪಾಲಿಕೆಯ ಅನುದಾನದಿಂದ ಚಿಕಿತ್ಸಾ ವೆಚ್ಚ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ಈಗಾಗಲೇ ಚಿಕಿತ್ಸಾ ವೆಚ್ಚ ಪಡೆದುಕೊಂಡಿರುವ ಕಾರ್ಪೋರೇಟರ್ ಗಳಿಂದ, ಹಣ ವಸೂಲಿ ಮಾಡಲು ಕ್ರಮಕೈಗೊಳ್ಳಬೇಕು’ ಎಂದು ಮಾಜಿ ಪಾಲಿಕೆ ಸದಸ್ಯ ಐಡಿಯಲ್ ಗೋಪಿ ಆಗ್ರಹಿಸಿದ್ದಾರೆ.
ತಾವು ಪಾಲಿಕೆ ಸದಸ್ಯರಾಗಿದ್ದ ವೇಳೆ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡಿದ್ದೆನೆ. ಈ ವೇಳೆ ಯಾವುದೇ ಕಾರ್ಪೋರೇಟರ್ ಗಳಿಗೆ ಚಿಕಿತ್ಸಾ ವೆಚ್ಚ ಭರಿಸಿರಲಿಲ್ಲ. ಆದರೆ ಪ್ರಸ್ತುತ ಅವಧಿಯಲ್ಲಿ ಕೆಲ ಕಾರ್ಪೋರೇಟರ್ ಗಳು ಚಿಕಿತ್ಸಾ ವೆಚ್ಚ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.

ಒಂದು ವೇಳೆ ಪಡೆದುಕೊಂಡಿರುವುದು ನಿಜವಾದರೆ, ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ನಾಗರೀಕರ ತೆರಿಗೆ ಹಣದ ದುರ್ಬಳಕೆಯಾಗುತ್ತದೆ. ಆಡಿಟ್ ಆಕ್ಷೇಪಣೆಗೂ ಗುರಿಯಾಗುತ್ತದೆ. ಈ ಕಾರಣದಿಂದ ಪಾಲಿಕೆ ಆಡಳಿತ ಚಿಕಿತ್ಸಾ ವೆಚ್ಚ ಭರಿಸಿದ ಪ್ರಕರಣಗಳ ಕುರಿತಂತೆ ಸಮಗ್ರ ಮಾಹಿತಿ ಕಲೆ ಹಾಕಬೇಕು. ಸದರಿ ಕಾರ್ಪೋರೇಟರ್ ಗಳಿಂದ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಪಾಲಿಕೆ ವ್ಯಾಪ್ತಿ ವಿಸ್ತರಣೆ: ಕಳೆದ ಒಂದೂವರೆ ದಶಕಗಳ ಅವಧಿಯಲ್ಲಿ ಶಿವಮೊಗ್ಗ ನಗರ ಶರವೇಗದಲ್ಲಿ ಬೆಳವಣಿಗೆಯಾಗುತ್ತಿದೆ. ನಗರದ ಹೊರವಲಯದ ಗ್ರಾಮ ಪಂಚಾಯ್ತಿ ಅಧೀನದಲ್ಲಿ ದೊಡ್ಡ ದೊಡ್ಡ ಬಡಾವಣೆಗಳು ಅಭಿವೃದ್ದಿಯಾಗಿವೆ. ಆದರೆ ಸದರಿ ವಸತಿ ಪ್ರದೇಶಗಳಿಗೆ ಸಮರ್ಪಕ ಮೂಲಸೌಕರ್ಯ ಲಭ್ಯವಾಗುತ್ತಿಲ್ಲ. ನಾಗರೀಕರು ನಾನಾ ರೀತಿಯ ಸಮಸ್ಯೆ ಎದುರಿಸುವಂತಾಗಿದೆ ಎಂದು ತಿಳಿಸಿದ್ಧಾರೆ.
ಕಳೆದ 27 ವರ್ಷಗಳಿಂದ ನಗರ ವ್ಯಾಪ್ತಿ ಪರಿಷ್ಕರಣೆಯಾಗಿಲ್ಲ. ಈ ಕಾರಣದಿಂದ ವೈಜ್ಞಾನಿಕವಾಗಿ ನಗರ ವ್ಯಾಪ್ತಿ ವಿಸ್ತರಣೆಯಾಗಬೇಕು. ಜೊತೆಗೆ ಪಾಲಿಕೆ ವಾರ್ಡ್ ಗಳ ಸಂಖ್ಯೆಯನ್ನು 50 ರಿಂದ 60 ಕ್ಕೆ ಹೆಚ್ಚಳ ಮಾಡಬೇಕು. ಈ ನಿಟ್ಟಿನಲ್ಲಿ ನಗರಾಭಿವೃದ್ದಿ ಇಲಾಖೆ, ಪಾಲಿಕೆ ಆಡಳಿತ ಹಾಗೂ ಜಿಲ್ಲಾಡಳಿತದ ಕ್ರಮಕೈಗೊಳ್ಳಬೇಕು ಎಂದು ಇದೇ ವೇಳೆ ಐಡಿಯಲ್ ಗೋಪಿ ಆಗ್ರಹಿಸಿದ್ದಾರೆ.