
‘ದಿಕ್ಕು ತಪ್ಪಿದ, ಮೌಲ್ಯಗಳನ್ನು ಮರೆತ ಪತ್ರಿಕೋದ್ಯಮ’ – ಹಿರಿಯ ಪತ್ರಕರ್ತ ಸಮಿವುಲ್ಲಾ ಬೆಲಗೂರು
ಶಿವಮೊಗ್ಗ, ಜು. 1: ‘ಪತ್ರಿಕೋದ್ಯಮ ಇಂದು ದಿಕ್ಕು ತಪ್ಪುತ್ತಿದೆ. ಮೌಲ್ಯಗಳನ್ನು ಮರೆತಿದೆ. ಕಾಸಿಗಾಗಿ ಸುದ್ದಿ, ಧರ್ಮಕ್ಕಾಗಿ ಸುದ್ದಿ, ರಾಜಕಾರಣಕ್ಕಾಗಿ ಸುದ್ದಿಗಳು ಸರಕಾಗಿ ಹೋಗಿವೆ. ದ್ವೇಷದ ಮತ್ತು ಸುಳ್ಳಿನ ಪತ್ರಿಕೋದ್ಯಮವು, ಮನುಷ್ಯತ್ವವನ್ನೇ ನುಂಗಿಹಾಕಿ ಸಮಾಜಕ್ಕೆ ಕೊಳ್ಳಿಯಿಡುವ ಕೆಲಸ ಮಾಡುತ್ತಿವೆ’ ಎಂದು ಹಿರಿಯ ಪತ್ರಕರ್ತ ಸಮಿವುಲ್ಲಾ ಬೆಲಗೂರು ಹೇಳಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯಿಂದ ಶಿವಮೊಗ್ಗ ನಗರದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಹಂಬಲದ ಪತ್ರಿಕೋದ್ಯಮ ಮರೆಯಾಗಿದೆ. ಪತ್ರಿಕೋದ್ಯಮವೇ ಒಂದು ಗ್ಲಾಮರ್ ಸ್ವರೂಪ ಪಡೆದುಕೊಂಡಿದೆ. ಯಾವುದೋ ಸಿದ್ಧಾಂತಗಳಿಗೆ, ಹಣಕ್ಕೆ ಒತ್ತು ಕೊಟ್ಟು, ಪತ್ರಿಕೋದ್ಯಮವನ್ನೇ ಹದಗೆಡುವಂತೆ ಮಾಡಲಾಗುತ್ತಿದೆ. ನಿಜ ಪತ್ರಿಕೋದ್ಯಮವೇ ಮಿಥ್ಯವಾಗುತ್ತಿದೆ. ಮಿಥ್ಯ ಪತ್ರಿಕೋದ್ಯಮವನ್ನೇ ಸತ್ಯವನ್ನಾಗಿಸಲು ಹೆಣಗಾಡಲಾಗುತ್ತಿರುವುದು ದುರಂತದ ಸಂಗತಿಯಾಗಿದೆ ಎಂದರು.
ಪತ್ರಕರ್ತ ಎಂದರೆ ಅವನೇನೂ ಆಕಾಶದಿಂದ ಉದುರಿದವನಲ್ಲ. ಈ ನೆಲದ ಸ್ಪರ್ಶ ಗುಣವನ್ನು ಅರಿತಾಗ ಮಾತ್ರ ಆತ ನಿಜವಾದ ಪತ್ರಕರ್ತನಾಗಲು ಸಾಧ್ಯ. ವ್ಯವಸ್ಥೆಯನ್ನು ಹಾಳುಮಾಡುವ ಸಾಮಾಜಿಕ ಜವಾಬ್ದಾರಿ ಮರೆತಿರುವ ಪತ್ರಿಕೋದ್ಯಮದಿಂದ ಈ ಸಮಾಜಕ್ಕೆ ದೊಡ್ಡ ಹಾನಿಯಾಗುವುದಂತೂ ನಿಜ. ಇದರಿಂದ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರು ಮಾತನಾಡಿ, ಪತ್ರಕರ್ತ ಯಾವುದೇ ಆಮಿಷಗಳಿಗೆ ಬಲಿಯಾಗಬಾರದು. ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಅವರು ಮಾತನಾಡಿ, ಪತ್ರಿಕೋದ್ಯಮ ಎಂಬುದು ಅಹಂಕಾರವಲ್ಲ. ಅದು ಸಮಾಜಕ್ಕೆ ಅಲಂಕಾರವಾಗಬೇಕು. ಮೌಲ್ಯಗಳು ಮರೆಯಾಗಬಾರದು ಎಂದರು.
ಸನ್ಮಾನ: ಸಮಾರಂಭದಲ್ಲಿ ಪ್ರಿಂಟರ್ ಹರೀಶ್, ಡಿಟಿಪಿ ಆಪರೇಟರ್ ಶೋಭಾ ಹಾಗೂ ಪತ್ರಿಕಾ ವಿತರಕ ಚಂದ್ರಶೇಖರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಪಾಲಿಕೆ ಮೇಯರ್ ಶಿವಕುಮಾರ್, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್, ಟೆಲೆಕ್ಸ್ ರವಿಕುಮಾರ್, ವೈದ್ಯ, ವಿ.ಟಿ.ಅರುಣ್, ಹಾಲಸ್ವಾಮಿ, ಕೆ.ಆರ್.ಸೋಮನಾಥ್, ಗಾ.ರಾ.ಶ್ರೀನಿವಾಸ್, ಹುಚ್ಚುರಾಯಪ್ಪ, ದೀಪಕ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.