
ಪತ್ನಿಯ ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ
ಭದ್ರಾವತಿ ತಾಲೂಕು ಹೊಳೆಹೊನ್ನೂರು ಪಟ್ಟಣದಲ್ಲಿ ನಡೆದಿದ್ದ ಘಟನೆ
ಶಿವಮೊಗ್ಗ, ಜು. 2: ಪತ್ನಿಯ ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಭದ್ರಾವತಿಯ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಹೊಳೆಹೊನ್ನೂರು ಪಟ್ಟಣದ ನಿವಾಸಿ ಗಣೇಶ್ (44) ಶಿಕ್ಷೆಗೊಳಗಾದ ಪತಿ ಎಂದು ಗುರುತಿಸಲಾಗಿದೆ. ಜೀವಾವಧಿ ಶಿಕ್ಷೆಯ ಜೊತೆಗೆ 50 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 3 ವರ್ಷಗಳ ಕಾಲ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ.
ನ್ಯಾಯಾಧೀಶರಾದ ಶಶಿಧರ ಅವರು ಜು. 1 ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರತ್ನಮ್ಮರವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನಲೆ: 3-5-2020 ರಂದು ಕೌಟಂಬಿಕ ಕಲಹದ ಹಿನ್ನಲೆಯಲ್ಲಿ ಗಣೇಶನು ಪತ್ನಿ ಗೀತಾ (40) ಅವರ ತಲೆಗೆ ಆಯುಧವೊಂದರಿಂದ ಹೊಡೆದು ಕೊಲೆ ಮಾಡಿದ್ದ. ಈ ಕುರಿತಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ಭದ್ರಾವತಿ ಗ್ರಾಮಾಂತರ ಠಾಣೆ ಇನ್ಸ್’ಪೆಕ್ಟರ್ ಇ.ಓ. ಮಂಜುನಾಥ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಎಎಸ್ಐ ಶ್ರೀನಿವಾಸ್ ಅವರು ಪ್ರಕರಣದ ತನಿಖಾ ಸಹಾಯಕರಾಗಿ ಕಾರ್ಯನಿರ್ವಹಣೆ ಮಾಡಿದ್ದರು.