
ಶಿವಮೊಗ್ಗ : ರೌಡಿ ಶೀಟರ್ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು!
ಶಿವಮೊಗ್ಗ, ಜು. 3: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ ರೌಡಿ ಶೀಟರ್ ಓರ್ವನ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಘಟನೆ, ಸೋಮವಾರ ಶಿವಮೊಗ್ಗ ನಗರದ ಹೊರವಲಯದಲ್ಲಿ ನಡೆದಿದೆ.
ಸೈಪು ಯಾನೆ ಸೈಫುಲ್ಲಾ ಎಂಬಾತನೇ ಬಂಧಿತ ರೌಡಿ ಶೀಟರ್ ಎಂದು ಗುರುತಿಸಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 307 (ಕೊಲೆ ಯತ್ನ) ರ ಅಡಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಈತ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದ.
ನಗರದ ಹೊರವಲಯದ ಪ್ರದೇಶವೊಂದರಲ್ಲಿ ಆರೋಪಿ ಅಡಗಿಕೊಂಡಿರುವ ಖಚಿತ ಮಾಹಿತಿ ಆಧಾರದ ಮೇಲೆ, ಜಯನಗರ ಠಾಣೆ ಸಬ್ ಇನ್ಸ್’ಪೆಕ್ಟರ್ ನವೀನ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ತೆರಳಿದೆ. ಈ ವೇಳೆ ಆರೋಪಿಯು ಪೊಲೀಸ್ ಪೇದೆಯೋರ್ವರ ಮೇಲೆ ಹಲ್ಲೆಗೆ ಮುಂದಾಗಿದ್ದ.
ತಕ್ಷಣವೇ ಸಬ್ ಇನ್ಸ್’ಪೆಕ್ಟರ್ ನವೀನ್ ಅವರು ಆರೋಪಿ ಕಾಲಿಗೆ ಗುಂಡಿಕ್ಕಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡಿರುವ ಆರೋಪಿ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
‘ಆರೋಪಿ ವಿರುದ್ದವಿದೆ 18 ಪ್ರಕರಣ’ : ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಾಹಿತಿ
‘ಆರೋಪಿ ಸೈಫು ಕ್ರಿಮಿನಲ್ ಹಿನ್ನಲೆವುಳ್ಳ ವ್ಯಕ್ತಿಯಾಗಿದ್ದಾನೆ. ಈತನ ವಿರುದ್ದ 18 ಪ್ರಕರಣಗಳು ದಾಖಲಾಗಿವೆ. ಗುಂಡಾ ಕಾಯ್ದೆಯಡಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಮಾರ್ಕೆಟ್ ಫೌಜಾನ್ ಗ್ಯಾಂಗ್ ನ ಸದಸ್ಯನಾಗಿದ್ದಾನೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.