
ಗುಂಡಿ ಗಂಡಾಂತರ : ಗಮನ ಹರಿಸುವುದೆ ಜಲ ಮಂಡಳಿ ಆಡಳಿತ?
*ಮುಗಿಯದ 24X7 ಕುಡಿಯುವ ನೀರು ಕಾಮಗಾರಿ ಕಿರಿಕಿರಿ!
ಶಿವಮೊಗ್ಗ, ಜು. 4: ಶಿವಮೊಗ್ಗ ನಗರದ ಹೊರವಲಯದ ಬಡಾವಣೆಗಳಲ್ಲಿ, ಕಳೆದ ಒಂದೂವರೆ ವರ್ಷಗಳಿಂದ ಅನುಷ್ಠಾನಗೊಳ್ಳುತ್ತಿರುವ 24X7 ಕುಡಿಯುವ ನೀರು ಪೂರೈಕೆ ಕಾಮಗಾರಿ ಸದ್ಯಕ್ಕೆ ಪೂರ್ಣಗೊಳ್ಳುವ ಲಕ್ಷಣಗಳು ಗೋಚರವಾಗುತ್ತಿಲ್ಲ!
ಹಲವೆಡೆ ಜನವಸತಿ ಪ್ರದೇಶಗಳಲ್ಲಿ ನಡೆಸಲಾಗಿರುವ ಅಪೂರ್ಣ ಕಾಮಗಾರಿಯಿಂದ, ನಾಗರೀಕರು ತೊಂದರೆ ಪಡುವಂತಾಗಿದೆ. ತೀವ್ರ ಕಿರಿಕಿರಿ ಎದುರಿಸುವಂತಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ಪೈಪ್ ಅಳವಡಿಕೆ ಹಾಗೂ ದುರಸ್ತಿಗೆಂದು ತೆಗೆದು ಬಿಟ್ಟಿರುವ ಗುಂಡಿಗಳು ಗಂಡಾಂತರಕಾರಿಯಾಗಿ ಪರಿಣಮಿಸಿವೆ.
‘ಪಾಲಿಕೆ 1 ನೇ ವಾರ್ಡ್ ಬೊಮ್ಮನಕಟ್ಟೆ ಬಡಾವಣೆ ಆಶ್ರಯ ಕಾಲೋನಿ ಎ ಬ್ಲಾಕ್ ನಲ್ಲಿ, ಕಳೆದ ಹಲವು ತಿಂಗಳುಗಳ ಹಿಂದೆ ಮುಖ್ಯ ರಸ್ತೆಯಲ್ಲಿ ಪೈಪ್ ಲೈನ್ ಅಳವಡಿಕೆ ಕಾಮಗಾರಿ ನಡೆಸಲಾಗಿತ್ತು. ಈ ವೇಳೆ ತೆಗೆಯಲಾಗಿದ್ದ ಗುಂಡಿಯನ್ನು ಇಲ್ಲಿಯವರೆಗೂ ಮುಚ್ಚಿಲ್ಲ’ ಎಂದು ಸಾಮಾಜಿಕ ಹೋರಾಟಗಾರ ಬೊಮ್ಮನಕಟ್ಟೆ ಕೆ. ಮಾಲತೇಶ್ ಅವರು ದೂರಿದ್ದಾರೆ.
ನಾಗರೀಕರಿಗೆ ಅಪಾಯಕಾರಿಯಾಗಿ ಪರಿಣಮಿಸಿರುವ ಗುಂಡಿ ಮುಚ್ಚಲು ಕ್ರಮಕೈಗೊಳ್ಳುವಂತೆ, ಈಗಾಗಲೇ ಜಲ ಮಂಡಳಿ ಆಡಳಿತ ಹಾಗೂ ಸ್ಥಳೀಯ ಕಾರ್ಪೋರೇಟರ್ ಅವರ ಗಮನಕ್ಕೆ ನಿವಾಸಿಗಳು ತಂದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಸೋಮಿನಕೊಪ್ಪ, ಕೆ.ಹೆಚ್.ಬಿ. ಕಾಲೋನಿ ಸುತ್ತಮುತ್ತಲೂ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಅಪೂರ್ಣವಾಗಿದೆ. ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ತಕ್ಷಣವೇ ಜಲ ಮಂಡಳಿ ಅಧಿಕಾರಿಗಳು ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಕಚೇರಿ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಬೊಮ್ಮನಕಟ್ಟೆ ಕೆ. ಮಾಲತೇಶ್ ಅವರು ಎಚ್ಚರಿಕೆ ನೀಡಿದ್ದಾರೆ.
‘ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಪ್ರತಿಭಟನೆ’ : ಹೋರಾಟಗಾರ ಬೊಮ್ಮನಕಟ್ಟೆ ಕೆ. ಮಾಲತೇಶ್
*** ‘ಶಿವಮೊಗ್ಗ ನಗರದ ಹೊರವಲಯದ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ 24X7 ಕಾಮಗಾರಿ ವರ್ಷಗಳೇ ಉರುಳಿದರೂ ಪೂರ್ಣಗೊಂಡಿಲ್ಲ. ಸದ್ಯದ ಕಾಮಗಾರಿಯ ವೇಗ ಗಮಿಸಿದರೆ, ಇನ್ನೂ ಎರಡ್ಮೂರು ವರ್ಷವಾದರೂ ಕೆಲಸ ಪೂರ್ಣವಾಗುವ ಲಕ್ಷಣಗಳಿಲ್ಲವಾಗಿದೆ.

ಇದರಿಂದ ನಾಗರೀಕರಿಗೆ ಕುಡಿಯುವ ನೀರು ಪೂರೈಕೆಯಾಗುವುದು ಯಾವಾಗ? ಎಂಬುವುದು ಯಕ್ಷಪ್ರಶ್ನೆಯಾಗಿದೆ. ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಬೇಕಾಗಿದೆ. ಕಾಲಮಿತಿಯೊಳಗೆ ಕಾಮಗಾರಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಬೊಮ್ಮನಕಟ್ಟೆ ಮಾಲತೇಶ್ ಅವರು ಅವರು ಎಚ್ಚರಿಕೆ ನೀಡಿದ್ದಾರೆ.