
ಶಿವಮೊಗ್ಗ : ಭರ್ತಿಯ ಹಂತಕ್ಕೆ ತುಂಗಾ ಡ್ಯಾಂ – ನೀರು ಹೊರಹರಿಸಲು ಕೌಂಟ್ ಡೌನ್!
ಶಿವಮೊಗ್ಗ, ಜು. 5: ಮುಂಗಾರು ಮಳೆಯ ಅವಧಿಯಲ್ಲಿ ರಾಜ್ಯದಲ್ಲಿ ಮೊದಲಿಗೆ ಭರ್ತಿಯಾಗುವ ಹಾಗೂ ಕಡಿಮೆ ವ್ಯಾಪ್ತಿ – ವಿಸ್ತೀರ್ಣ ಹೊಂದಿರುವ, ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿರುವ ತುಂಗಾ ಜಲಾಶಯವು ಗರಿಷ್ಠ ಮಟ್ಟಕ್ಕೆ ಬರಲಾರಂಭಿಸಿದೆ!
ಬುಧವಾರ ಬೆಳಿಗ್ಗೆ 8.30 ರ ಮಾಹಿತಿಯಂತೆ, ಡ್ಯಾಂ ಗರಿಷ್ಠ ಮಟ್ಟವಾದ 588.24 ಅಡಿ ತಲುಪಲು ಇನ್ನೂ ಕೇವಲ 2 ಅಡಿಯಷ್ಟು ನೀರು ಹರಿದು ಬರಬೇಕಾಗಿದೆ. ಪ್ರಸ್ತುತ 4830 ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ. ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ, ಒಳಹರಿವಿನ ಪ್ರಮಾಣದಲ್ಲಿ ನಿರಂತರ ಏರಿಕೆ ಕಂಡುಬರುತ್ತಿದೆ. ಇದರಿಂದ ಇಂದು ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಡ್ಯಾಂನಿಂದ ನೀರು ಹೊರಹರಿಸುವ ಸಾಧ್ಯತೆಗಳಿವೆ.

ಬರಿದಾಗುವ ಹಂತದಲ್ಲಿತ್ತು: ಒಟ್ಟಾರೆ ಡ್ಯಾಂ ನೀರಿನ ಸಂಗ್ರಹಣ ಸಾಮರ್ಥ್ಯ 3.24 ಟಿಎಂಸಿ ಆಗಿದೆ. ಪ್ರಸ್ತುತ ಮುಂಗಾರು ಮಳೆ ವಿಳಂಬದ ಕಾರಣದಿಂದ ಡ್ಯಾಂ ನೀರಿನ ಸಂಗ್ರಹದಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡುಬಂದಿತ್ತು. ಇದೀಗ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಡ್ಯಾಂ ಗರಿಷ್ಠ ಮಟ್ಟಕ್ಕೆ ಬರಲಾರಂಭಿಸಿದೆ.
ತುಂಗಾ ನದಿ ಪಾತ್ರದಲ್ಲಿ ಎಚ್ಚರವಹಿಸಲು ಕರ್ನಾಟಕ ನೀರಾವರಿ ನಿಗಮ ಮನವಿ
*** ‘ತುಂಗಾ ಡ್ಯಾಂ ನೀರಿನ ಸಂಗ್ರಹ ಗರಿಷ್ಠ ಮಟ್ಟಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ, ಡ್ಯಾಂನಿಂದ ನದಿಗೆ ಯಾವ ಸಮಯದಲ್ಲಿ ಬೇಕಾದರು ನೀರು ಹೊರಹರಿಸುವ ಸಾಧ್ಯತೆಯಿದೆ’ ಎಂದು ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಬಿ.ಸುರೇಶ್ ಅವರು ತಿಳಿಸಿದ್ದಾರೆ.

ಈ ಕುರಿತಂತೆ ಅವರು ಬುಧವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ಧಾರೆ. ಡ್ಯಾಂ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡಿದೆ. ಡ್ಯಾಂ ಒಳಹರಿವಿನಲ್ಲಿ ಏರಿಕೆ ಕಂಡುಬರಲಾರಂಭಿಸಿದೆ. ತುಂಗಾ ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ನಾಗರೀಕರು ಎಚ್ಚರಿಕೆ ವಹಿಸಬೇಕು. ನದಿಪಾತ್ರದಲ್ಲಿ ಯಾವುದೇ ಚಟುವಟಿಕೆ ನಡೆಸಬಾರದು ಎಂದು ಅವರು ಮನವಿ ಮಾಡಿದ್ಧಾರೆ.