
ಕಾಡುಗಳಲ್ಲಿ ಅಕ್ರಮ ಮರಳು ದಂಧೆ ಮಟ್ಟ ಹಾಕಲು ಅರಣ್ಯಾಧಿಕಾರಿಗಳಿಗೆ ಶಿವಮೊಗ್ಗ ಡಿಸಿ ಖಡಕ್ ವಾರ್ನಿಂಗ್!
ಶಿವಮೊಗ್ಗ, ಜು. 5: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿ ಮತ್ತು ಮಂಡಗದ್ದೆ ಸೇರಿದಂತೆ ಹಲವು ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿರುವ ಬಗ್ಗೆ, ಸಾರ್ವಜನಿಕ ವಲಯದಿಂದ ದೂರುಗಳು ಕೇಳಿ ಬರುತ್ತಿವೆ. ತಕ್ಷಣವೇ ಅಕ್ರಮಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ವಲಯ ಅರಣ್ಯಾಧಿಕಾರಿಗಳಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಖಡಕ್ ಸೂಚನೆ ನೀಡಿದ್ದಾರೆ.
ಬುಧವಾರ ಶಿವಮೊಗ್ಗದ ಡಿಸಿ ಕಚೇರಿ ಸಭಾಂಗಣದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಏರ್ಪಡಿಸಿದ್ದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣಿಗಾರಿಕೆ ಬಂದ್: ಮಳೆಗಾಲ ಪೂರ್ಣಗೊಳ್ಳುವವರೆಗೆ ಮರಳು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಈಗಾಗಲೇ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಆದೇಶದ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಹೊಸನಗರ ತಾಲೂಕಿನ ಕೆಲವು ಗ್ರಾಮಗಳ ವ್ಯಾಪ್ತಿಯಲ್ಲಿ ಸರ್ಕಾರಿ, ಕಂದಾಯ, ಅರಣ್ಯ ಹಾಗೂ ಕೆ.ಪಿ.ಸಿ.ಎಲ್ ಪ್ರದೇಶಗಳಲ್ಲಿ ಅನಧಿಕೃತ ಮರಳು ಗಣಿಗಾರಿಕೆ, ಸಾಗಾಣಿಕೆ ಹಾಗೂ ದಾಸ್ತಾನು ಮಾಡಿರುವ ಬಗ್ಗೆ ದೂರುಗಳಿವೆ. ಈ ದೂರುಗಳನ್ನಾಧರಿಸಿ, ನ್ಯಾಯಾಲಯಗಳಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
ಅಲ್ಲದೆ ಹಲವು ಬಾರಿ ಮರಳು ಜಪ್ತಿ ಮಾಡಿಕೊಂಡು ವಿಲೇವಾರಿ ಮಾಡಲಾಗಿದೆ. ಈ ಎಲ್ಲಾ ಘಟನಾವಳಿಗಳ ನಂತರವೂ ಅಕ್ರಮ ಗಣಿಗಾರಿಕೆ – ಸಾಗಾಣಿಕೆ ಮುಂದುವರೆದಿದೆ. ಕಂದಾಯ, ಅರಣ್ಯ ಹಾಗೂ ಪೊಲೀಸ್ ಇಲಾಖೆಯಿಂದ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.
ಪರಿಶೀಲನೆಗೆ ಸೂಚನೆ: ಮತ್ತೂರು ಗ್ರಾಮದ ಸರ್ವೇ ನಂ. 6 ರಲ್ಲಿ ಕಲ್ಲು ಗಣಿ ಗುತ್ತಿಗೆ ಸಂಬಂಧ ಸಾರ್ವಜನಿಕರು ನೀಡಿರುವ ಅರ್ಜಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯಿಂದ ವರದಿ ಪಡೆದು ನಂತರ ನಿಯಮ ಉಲ್ಲಂಘನೆಯಾಗಿದ್ದಲ್ಲಿ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂವಿಜ್ಞಾನ ವಿಂಧ್ಯಾ ಅವರಿಗೆ ಸೂಚಿಸಿದರು.
ಗೆಜ್ಜೇನಹಳ್ಳಿಯ ವಿವಿಧ ಸರ್ವೇ ನಂಬರ್‍ಗಳಲ್ಲಿನ ಖಾಸಗಿ ಜಮೀನುಗಳಲ್ಲಿ ಭೂ ಪರಿವರ್ತನೆ ದಾಖಲೆಗಳನ್ನು ಸಲ್ಲಿಸಿರುವ ಕಲ್ಲು ಪುಡಿ ಮಾಡುವ ಘಟಕಗಳಿಗೆ ಪರವಾನಿಗೆ ಅವಧಿ ವಿಸ್ತರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಕುರಿತಂತೆ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಹಿರಿಯ ಭೂ ವಿಜ್ಞಾನಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್, ಡಿ.ಎಫ್.ಒ. ಶಿವಶಂಕರ್, ಆಶಿಸ್‍ರೆಡ್ಡಿ, ಆರ್.ಟಿ.ಒ. ಶಂಕರಪ್ಪ, ಗಣಿ ಮತ್ತು ಭೂ ವಿಜ್ಞಾನಿ ವಿಂಧ್ಯಾ, ಉಪ ವಿಭಾಗಾಧಿಕಾರಿ ರವಿಚಂದ್ರನಾಯ್ಕ, ಕು.ಪಲ್ಲವಿ ಸಾತೇನಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಅಕ್ರಮ ಜಂಬಿಟ್ಟಿಗೆ ಕ್ವಾರಿಗಳ ವಿರುದ್ದ ಕ್ರಮಕ್ಕೆ ಆದೇಶ
*** ಜಿಲ್ಲೆಯ ಸಾಗರ ತಾಲೂಕಿನ ಆಯ್ದ ಅರಣ್ಯ ಪ್ರದೇಶಗಳ ಮಧ್ಯ ಭಾಗದಲ್ಲಿ, ಅನಧಿಕೃತ ಜಂಬಿಟ್ಟಿಗೆ ಕ್ವಾರಿಗಳು ಸಕ್ರಿಯವಾಗಿರುವ ಬಗ್ಗೆ ದೂರುಗಳು ಬಂದಿವೆ. ವಿಶೇಷವಾಗಿ ಕೋಗಾರು, ಚನ್ನಗೊಂಡ ಮತ್ತು ಬೆಳ್ಳಂದೂರುಗಳಲ್ಲಿ ಜಂಬಿಟ್ಟಿಗೆ ಕ್ವಾರಿಗಳಿರುವ ಬಗ್ಗೆ ಮಾಹಿತಿಗಳಿವೆ. ಈ ಕೂಡಲೇ ಅಕ್ರಮಗಳಲ್ಲಿ ತೊಡಗಿರುವ ವ್ಯಕ್ತಿಗಳು ವಿರುದ್ಧ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.