
ರಾತ್ರಿಯಿಂದಲೇ ತುಂಗಾ ಜಲಾಶಯದಿಂದ ನೀರು ಹೊರಕ್ಕೆ!
ಶಿವಮೊಗ್ಗ, ಜು. 6: ಶಿವಮೊಗ್ಗ ತಾಲೂಕು ಗಾಜನೂರು ಗ್ರಾಮದಲ್ಲಿರುವ ತುಂಗಾ ಜಲಾಶಯ ಗರಿಷ್ಠ ಮಟ್ಟ ತಲುಪಿದೆ. ಬುಧವಾರ ರಾತ್ರಿಯಿಂದಲೇ ಡ್ಯಾಂನಿಂದ ನದಿಗೆ ನೀರು ಹರಿಸಲಾಗುತ್ತಿದೆ.
ಡ್ಯಾಂ ಗರಿಷ್ಠ ಮಟ್ಟವಾದ 588.24 ಅಡಿಗೆ ನೀರು ತಲುಪುತ್ತಿದ್ದಂತೆ, ಬುಧವಾರ ರಾತ್ರಿ ಸರಿಸುಮಾರು 10 ಗಂಟೆಗೆ ಎರಡು ಕ್ರಸ್ಟ್ ಗೇಟ್ ಗಳನ್ನು ತೆರೆದು 7 ಸಾವಿರ ಕ್ಯೂಸೆಕ್ ನಷ್ಟು ನೀರು ಹೊರ ಬಿಡಲಾಗಿದೆ.
ಗುರುವಾರ ಬೆಳಿಗ್ಗೆಯ ಮಾಹಿತಿಯಂತೆ, ಡ್ಯಾಂಗೆ 12,082 ಕ್ಯೂಸೆಕ್ ಒಳಹರಿವಿದೆ. ಎರಡು ಕ್ರಸ್ಟ್ ಗೇಟ್ ಗಳ ಮೂಲಕ 7545 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಭಾರೀ ಮಳೆ: ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಧಾರಾಕಾರ ವರ್ಷಧಾರೆಯಾಗುತ್ತಿದೆ. ಇದರಿಂದ ಡ್ಯಾಂಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ.
ಕಳೆದ ವರ್ಷ ಜೂನ್ ಮೊದಲ ವಾರದ ಪ್ರಾರಂಭದಲ್ಲಿಯೇ ಡ್ಯಾಂ ಗರಿಷ್ಠ ಮಟ್ಟ ತಲುಪಿತ್ತು. ಪ್ರಸ್ತುತ ವರ್ಷ ಮುಂಗಾರು ಮಳೆ ವಿಳಂಬದಿಂದ, ಜಲಾಶಯದ ನೀರಿನ ಸಂಗ್ರಹದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿತ್ತು.
ಕಳೆದ ಕೆಲ ದಿನಗಳಿಂದ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ವ್ಯಾಪಕ ವರ್ಷಧಾರೆಯಾಗುತ್ತಿರುವುದರಿಂದ, ಡ್ಯಾಂಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸ್ತುತ ವರ್ಷ ಸುಮಾರು ಒಂದು ತಿಂಗಳ ವಿಳಂಬವಾಗಿ ಡ್ಯಾಂ ಗರಿಷ್ಠ ಮಟ್ಟ ತಲುಪಿದೆ.
ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿರುವುದರಿಂದ, ಡ್ಯಾಂ ಒಳಹರಿವಿನ ಪ್ರಮಾಣದಲ್ಲಿ ನಿರಂತರ ಹೆಚ್ಚಳ ಕಂಡುಬರುತ್ತಿದೆ. ಈಗಾಗಲೇ ಕರ್ನಾಟಕ ನೀರಾವರಿ ನಿಗಮ ನಿಯಮಿತವು, ಡ್ಯಾಂನಿಂದ ನೀರು ಹೊರಬಿಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ಎಚ್ಚರಿಕೆಯಿಂದಿರುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಚಿಕ್ಕ ಡ್ಯಾಂ: ಇತರೆ ಜಲಾಶಯಗಳಿಗೆ ಹೋಲಿಸಿದರೆ ತುಂಗಾ ಡ್ಯಾಂ ಕಡಿಮೆ ವ್ಯಾಪ್ತಿ, ವಿಸ್ತೀರ್ಣ ಹೊಂದಿದೆ. 3.24 ಟಿಎಂಸಿಯಷ್ಟು ನೀರು ಸಂಗ್ರಹಣೆ ಸಾಮರ್ಥ್ಯ ಹೊಂದಿದೆ. ಪ್ರತಿ ವರ್ಷ ಮುಂಗಾರಿನ ಮೊದಲ ಮಳೆಗೆ ಡ್ಯಾಂ ಗರಿಷ್ಠ ಮಟ್ಟ ತಲುಪುತ್ತದೆ. ತುಂಗಾ ಡ್ಯಾಂನಿಂದ ಹರಿಯುವ ನೀರಿನಿಂದಲೇ ಹೊಸಪೇಟೆಯ ತುಂಗಾಭದ್ರಾ ಜಲಾಶಯ ಮುಕ್ಕಾಲು ಪಾಲು ಭರ್ತಿಯಾಗುತ್ತದೆ.