
ರಕ್ಷಣಾ ಬೇಲಿಯಿಲ್ಲದ ಅಪಾಯಕಾರಿ ವಿದ್ಯುತ್ ಟ್ರಾನ್ಸ್ಫಾರ್ಮಾರ್’ಗಳು : ಕಣ್ಮುಚ್ಚಿ ಕುಳಿತಿದೆಯೇ ಇಂಧನ ಇಲಾಖೆ?!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಜು. 6: ಬಹುತೇಕ ಕಡೆ ವಿದ್ಯುತ್ ಟ್ರಾನ್ಸ್ಫಾರ್ಮಾರ್ (ಪರಿವರ್ತಕ) ಗಳ ಸುತ್ತಲು ರಕ್ಷಣಾ ಬೇಲಿ (ಫೆನ್ಸಿಂಗ್) ವ್ಯವಸ್ಥೆಯೇ ಇಲ್ಲವಾಗಿದೆ. ಇದರಿಂದ ಟ್ರಾನ್ಸ್ಫಾರ್ಮರ್ ಗಳು ಜನ-ಜಾನುವಾರುಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ!
ಅದರಲ್ಲಿಯೂ ಮಳೆಗಾಲದ ವೇಳೆ ತಾಂತ್ರಿಕ ಸಮಸ್ಯೆ, ಅಸಮರ್ಪಕ ನಿರ್ವಹಣೆ ಮತ್ತೀತರ ಕಾರಣಗಳಿಂದ ಕೆಲ ಟ್ರಾನ್ಸ್ಫಾರ್ಮಾರ್ ಗಳ ಸುತ್ತಲಿನ ಸ್ಥಳಗಳಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ಅನಾಹುತಕಾರಿ ಘಟನೆಗಳು ಹೆಚ್ಚಾಗುತ್ತಿವೆ.
ಇದಕ್ಕೆ ತಾಜಾ ನಿದರ್ಶನವೊಂದು ಶಿವಮೊಗ್ಗದ ಆದರ್ಶ ನಗರದಲ್ಲಿ ಬುಧವಾರ ಸಂಜೆ ನಡೆದಿದೆ. ರಕ್ಷಣಾ ಬೇಲಿಯಿಲ್ಲದ ವಿದ್ಯುತ್ ಟ್ರಾನ್ಸ್ಫಾರ್ಮಾರ್ ವೊಂದರ ಬಳಿ ಹಸಿರು ಮೇಯಲು ಹೋದ ಆಕಳುಗಳೆರೆಡು ವಿದ್ಯುತ್ ಶಾಕ್ ನಿಂದ ಸ್ಥಳದಲ್ಲಿಯೇ ಮೃತಪಟ್ಟ ದುರಂತವೊಂದು ನಡೆದಿದೆ.
‘ಸದರಿ ಸ್ಥಳದ ಬಳಿಯೇ ಪ್ರತಿನಿತ್ಯ ಸುತ್ತಮುತ್ತಲಿನ ಬಡಾವಣೆಯ ಮಕ್ಕಳು ಕ್ರಿಕೆಟ್ ಆಟವಾಡುತ್ತಾರೆ. ಮಳೆಯಿದ್ದ ಕಾರಣದಿಂದ ಆಟವಾಡಲು ಯಾರು ಬಂದಿಲ್ಲ. ಒಂದು ವೇಳೆ ಮಕ್ಕಳೇನಾದರೂ ಆಟವಾಡಲು ಬಂದಿದ್ದರೆ, ದೊಡ್ಡ ಅನಾಹುತವೊಂದು ಸಂಭವಿಸುತ್ತಿತ್ತು’ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ.
ಗಂಭೀರ ನಿರ್ಲಕ್ಷ್ಯ: ಟ್ರಾನ್ಸ್ಫಾರ್ಮಾರ್ ಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಕ್ಷತಾ ಬೇಲಿ (ಫೆನ್ಸಿಂಗ್) ಅಳವಡಿಸುವುದು ಕಡ್ಡಾಯವಾಗಿದೆ. ಆದರೆ ಇತ್ತೀಚೆಗೆ ಯಾವುದೇ ಟ್ರಾನ್ಸ್ಫಾರ್ಮಾರ್ ಗಳ ಬಳಿ ಫೆನ್ಸಿಂಗ್ ಗಳ ವ್ಯವಸ್ಥೆಯೇ ಇಲ್ಲವಾಗಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ.
ಬಡಾವಣೆ ಅಭಿವೃದ್ದಿ ಪಡಿಸುವ ವೇಳೆಯಲ್ಲಿಯೇ, ಟ್ರಾನ್ಸ್ಫಾರ್ಮಾರ್ ಗಳ ಸುತ್ತ ಫೆನ್ಸಿಂಗ್ ಅಳವಡಿಕೆಯಾದ ನಂತರ ಹಸ್ತಾಂತರ ಮಾಡಿಕೊಳ್ಳಲು ಅನುಮತಿ ನೀಡಬೇಕು. ಆದರೆ ಇವ್ಯಾವ ವ್ಯವಸ್ಥೆಯಾಗದಿದ್ದರೂ ವಿದ್ಯುತ್ ಸಂಸ್ಥೆಗಳು ಸದರಿ ಬಡಾವಣೆಗಳ ಹಸ್ತಾಂತರಕ್ಕೆ ಅನುಮತಿ ನೀಡುತ್ತಿವೆ. ಇದಕ್ಕೆ ಹಣದ ವ್ಯವಹಾರ ಮುಖ್ಯವಾಗಿರುವ ಅನುಮಾನಗಳು ವ್ಯಕ್ತವಾಗುತ್ತಿವೆ. ಇದೊಂದು ದೊಡ್ಡ ಪ್ರಮಾದವಾಗಿದೆ.
ಎಚ್ಚೆತ್ತುಕೊಳ್ಳಲಿ: ಇನ್ನಾದರೂ ಇಂಧನ ಇಲಾಖೆ ಸಚಿವರು, ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಕಡ್ಡಾಯವಾಗಿ ಟ್ರಾನ್ಸ್ಫಾರ್ಮಾರ್ ಗಳ ಸುತ್ತಲು ಫೆನ್ಸಿಂಗ್ ಅಳವಡಿಕೆ ಮಾಡುವ ವ್ಯವಸ್ಥೆ ಮಾಡಬೇಕು. ರಕ್ಷಣಾ ಬೇಲಿಯಿಲ್ಲದ ಟ್ರಾನ್ಸ್ಫಾರ್ಮಾರ್ ಗಳ ಪಟ್ಟಿ ಸಿದ್ದಪಡಿಸಿ, ಕಾಲಮಿತಿಯೊಳಗೆ ರಕ್ಷಣಾ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಗಮನಹರಿಸಲಿದೆಯೇ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.