ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ತಮಿಳುನಾಡಿನ ಹಿರಿಯ ಐಪಿಎಸ್ ಅಧಿಕಾರಿ!

ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ತಮಿಳುನಾಡಿನ ಹಿರಿಯ ಐಪಿಎಸ್ ಅಧಿಕಾರಿ!

ಸಿಬಿಐ ತನಿಖೆ ನಡೆಸಲು ವಿಪಕ್ಷಗಳ ಆಗ್ರಹ

ಕೊಯಮತ್ತೂರು (ತಮಿಳುನಾಡು), ಜು. 7: ತಮಿಳುನಾಡು ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಯೋರ್ವರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಕೊಯಮತ್ತೂರು ವಲಯದ ಡಿಐಜಿ ಆಗಿದ್ದ ವಿಜಯಕುಮಾರ್ (45) ಆತ್ಮಹತ್ಯೆಗೆ ಶರಣಾದ ಐಪಿಎಸ್ ಅಧಿಕಾರಿ ಎಂದು ಗುರುತಿಸಲಾಗಿದೆ. ಬೆಳಿಗ್ಗೆ ವಾಯು ವಿಹಾರ ಮುಗಿಸಿಕೊಂಡು ಮನೆಗೆ ಆಗಮಿಸಿದ ವಿಜಯಕುಮಾರ್ ಅವರು, ಗೃಹ ಕಚೇರಿ ಒಳಗೆ ಹೋಗಿದ್ದಾರೆ. ನಂತರ ತಮ್ಮ ಸರ್ವಿಸ್ ರಿವಾಲ್ವಾರ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.

ಈ ವೇಳೆ ಅವರ ಕುಟುಂಬ ಸದಸ್ಯರು ಯಾರು ಇರಲಿಲ್ಲ. ಗುರುವಾರ ಸಂಜೆಯೇ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರೆಲ್ಲರೂ ಹೊರ ತೆರಳಿದ್ದರು ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ತಮಿಳುನಾಡು ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ಸಿಎಂ ಸ್ಟಾಲಿನ್ ಅವರು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಪ್ರಕರಣದ ಕುರಿತಂತೆ ಸಿಬಿಐ ತನಿಖೆ ನಡೆಸಬೇಕು ಎಂದು ವಿಪಕ್ಷ ಎಐಎಡಿಎಂಕೆ ಆಗ್ರಹಿಸಿದೆ.

ವಿವಿಧೆಡೆ ಕಾರ್ಯನಿರ್ವಹಣೆ: ವಿಜಯಕುಮಾರ್ ಅವರ ಆತ್ಮಹತ್ಯೆಗೆ ಸ್ಪಷ್ಟ ಕಾರಣಗಳು ತಿಳಿದುಬಂದಿಲ್ಲ. ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ. ಆದರೆ ಅವರು ನಿದ್ರಾಹೀನತೆಯಿಂದ ಬಳಲುತ್ತಿದ್ದು, ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು. ಕಾರ್ಯಭಾರದ ಒತ್ತಡವೂ ಅವರ ಮೇಲಿತ್ತು ಎಂದು ಹೇಳಲಾಗುತ್ತಿದೆ.

2009 ರ ಬ್ಯಾಚ್ ನ ತಮಿಳುನಾಡು ಕೇಡರ್ ಅಧಿಕಾರಿಯಾಗಿದ್ದ ವಿಜಯಕುಮಾರ್ ಅವರು ಕಡಲೂರು, ಕಾಂಚಿಪುರಂ, ತಿರುವರೂರು, ನಾಗಪಟ್ಟಣಂ ಜಿಲ್ಲೆಗಳ ಎಸ್ಪಿಯಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಚೆನ್ನೈನಲ್ಲಿ ಡಿಸಿಪಿಯಾಗಿ ಕೆಲಸ ಮಾಡಿದ್ದರು. ಕಳೆದ ಜನವರಿ ತಿಂಗಳಲ್ಲಿ ಅವರು ಕೊಯಮತ್ತೂರಿ ವಲಯದ ಡಿಐಜಿಯಾಗಿ ನೇಮಕಗೊಂಡಿದ್ದರು.

‘ದೂರದೃಷ್ಟಿಯಿಲ್ಲದ, ಅಭಿವೃದ್ದಿ ಮುನ್ನೋಟವಿಲ್ಲದ ಬಜೆಟ್’ : ಸಿಎಂ ಸಿದ್ದರಾಮಯ್ಯ ಬಜೆಟ್ ಕುರಿತಂತೆ ಶಾಸಕ ಡಿ.ಎಸ್.ಅರುಣ್ ಅಭಿಪ್ರಾಯ Previous post ‘ದೂರದೃಷ್ಟಿಯಿಲ್ಲದ, ಅಭಿವೃದ್ದಿ ಮುನ್ನೋಟವಿಲ್ಲದ ಬಜೆಟ್’ : ಶಾಸಕ ಡಿ.ಎಸ್.ಅರುಣ್
Next post ಬಡ -‌ಮಧ್ಯಮ ವರ್ಗದವರ ಮೇಲೆ ತೆರಿಗೆ ಹೊರೆಯಾಗದಂತೆ ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣ – ಸಿಎಂ ಸಿದ್ದರಾಮಯ್ಯ