ಚಾಲನೆ ವೇಳೆ ಮೊಬೈಲ್ ಫೋನ್ ನಲ್ಲಿ ಮಾತು : ಖಾಸಗಿ ಬಸ್ ಚಾಲಕನಿಗೆ 5000 ರೂ. ದಂಡ!

ಚಾಲನೆ ವೇಳೆ ಮೊಬೈಲ್ ಫೋನ್ ನಲ್ಲಿ ಮಾತು : ಖಾಸಗಿ ಬಸ್ ಚಾಲಕನಿಗೆ 5000 ರೂ. ದಂಡ!

ವೀಡಿಯೋ ಮಾಡಿ ಟ್ರಾಫಿಕ್ ಪೊಲೀಸರಿಗೆ ರವಾನಿಸಿದ್ದ ಪ್ರಯಾಣಿಕ

ಶಿವಮೊಗ್ಗ, ಜು. 8: ಬಸ್ ಚಾಲನೆ ಮಾಡುತ್ತಿದ್ದ ವೇಳೆ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದ ಖಾಸಗಿ ಬಸ್ ಚಾಲಕನೋರ್ವನಿಗೆ, ಶಿವಮೊಗ್ಗ ಟ್ರಾಫಿಕ್ ಠಾಣೆ ಪೊಲೀಸರು 5 ಸಾವಿರ ರೂ. ದಂಡ ವಿಧಿಸಿದ್ದಾರೆ!

ಗಜಾನನ ಬಸ್ ಚಾಲಕ ಮನ್ಸೂರ್ ಅಲಿ ದಂಡ ಹಾಕಿಸಿಕೊಂಡ ಬಸ್ ಚಾಲಕ ಎಂದು ಗುರುತಿಸಲಾಗಿದೆ. ಐಎಂವಿ ಕಾಯ್ದೆಯಡಿ ಟ್ರಾಫಿಕ್ ಠಾಣೆ ಸರ್ಕಲ್ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಅವರು ಕೇಸ್ ಹಾಕಿದ್ದಾರೆ.

ವೀಡಿಯೋ!: ಜು. 6 ರಂದು ಸದರಿ ಬಸ್ ಚಾಲಕ ಮೊಬೈಲ್ ಪೋನ್ ನಲ್ಲಿ ಮಾತನಾಡುತ್ತ ಬಸ್ ಚಾಲನೆ ಮಾಡುತ್ತಿದ್ದ. ಇದನ್ನು ಅದೇ ಬಸ್ ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರೋರ್ವರು, ತಮ್ಮ ಮೊಬೈಲ್ ಫೋನ್ ನಲ್ಲಿ ಚಿತ್ರೀಕರಿಸಿಕೊಂಡಿದ್ದರು.

ನಂತರ ಟ್ರಾಫಿಕ್ ಪೊಲೀಸರಿಗೆ ವ್ಯಾಟ್ಸಾಪ್ ಮೂಲಕ ವೀಡಿಯೋ ರವಾನಿಸಿದ್ದರು. ಚಾಲಕನ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು.

ಸದರಿ ವೀಡಿಯೋ ಆಧಾರದ ಮೇಲೆ ಕಾರ್ಯಪ್ರವೃತ್ತರಾದ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಅವರು ಚಾಲಕನನ್ನು ಪತ್ತೆ ಹಚ್ಚಿ ಕೇಸ್ ದಾಖಲಿಸಿದ್ದಾರೆ.

‘ಬಸ್ ಚಾಲನೆ ವೇಳೆ ಮೊಬೈಲ್ ಫೋನ್ ನಲ್ಲಿ ಮಾತನಾಡದಂತೆ, ಪ್ರಯಾಣಿಕರ ಸುರಕ್ಷತೆ ಬಗ್ಗೆ ಎಚ್ಚರವಹಿಸುವಂತೆ ಹಾಗೂ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ’ ಚಾಲಕನಿಗೆ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಅವರು ಬುದ್ದಿಮಾತು ಹೇಳಿದ್ದಾರೆ ಎನ್ನಲಾಗಿದೆ.

Previous post ಬಡ -‌ಮಧ್ಯಮ ವರ್ಗದವರ ಮೇಲೆ ತೆರಿಗೆ ಹೊರೆಯಾಗದಂತೆ ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣ – ಸಿಎಂ ಸಿದ್ದರಾಮಯ್ಯ
ವಿಶ್ವವಿಖ್ಯಾತ ಜೋಗ ಜಲಪಾತದ ಜಲಧಾರೆಯ ವೈಭೋಗ Next post ಜೋಗ ಜಲಪಾತ ವೀಕ್ಷಣೆಗೆ ಹರಿದುಬಂದ ಜನಸಾಗರ!