
ಜೋಗ ಜಲಪಾತ ವೀಕ್ಷಣೆಗೆ ಹರಿದುಬಂದ ಜನಸಾಗರ!
ಜೋಗ್’ಫಾಲ್ಸ್, ಜು. 9: ವಿಶ್ವವಿಖ್ಯಾತ ಜೋಗ ಜಲಪಾತದ ಜಲಧಾರೆಯ ವೈಭೋಗ ವೀಕ್ಷಣೆಗೆ, ಭಾನುವಾರ ಪ್ರವಾಸಿಗರ ದಂಡೇ ಜಲಪಾತಕ್ಕೆ ಹರಿದುಬಂದಿತ್ತು. ಹಲವು ದಿನಗಳ ನಂತರ ಜೋಗವು ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು!
ಆಗಾಗ್ಗೆ ಬೀಳುವ ಮಳೆ, ಮಂಜು ಮುಸುಕಿದ ವಾತಾವರಣ, ಹಚ್ಚ ಹಸಿರಿನ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಧಾರೆಯ ಸೊಬಗು ಪ್ರವಾಸಿಗರ ಮನಸೂರೆಗೊಂಡಿತು.
ವಿಳಂಬ: ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ, ಜೋಗಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತದೆ. ಆದರೆ ಪ್ರಸ್ತುತ ವರ್ಷ ಜೂನ್ ತಿಂಗಳಲ್ಲಿ ಮುಂಗಾರು ಮಳೆ ದುರ್ಬಲವಾಗಿದ್ದ ಕಾರಣದಿಂದ ಜಲಪಾತದಲ್ಲಿ ಜಲಧಾರೆಯ ವೈಭೋಗ ಕಣ್ಮರೆಯಾಗಿತ್ತು. ಪ್ರವಾಸಿಗರ ಸಂಖ್ಯೆ ಕೂಡ ವಿರಳವಾಗಿತ್ತು.
ಜುಲೈ ತಿಂಗಳ ಮೊದಲ ವಾರದಿಂದ ಶರಾವತಿ ಕಣಿವೆ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ ವರ್ಷಧಾರೆಯಾಗುತ್ತಿದೆ. ಇದರಿಂದ ಮತ್ತೆ ಜಲಪಾತ ಭೋರ್ಗರೆಯಲಾರಂಭಿಸಿದೆ. ಇದನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಪ್ರವಾಸಿಗರು ದೌಡಾಯಿಸಲಾರಂಭಿಸಿದ್ದಾರೆ.
ಕಿರಿಕಿರಿ: ಜಲಪಾತದ ಬಳಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಜೋಗ ಅಭಿವೃದ್ದಿ ಪ್ರಾಧಿಕಾರದಿಂದ ಹಲವು ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿವೆ. ಇದು ವಾಹನಗಳ ನಿಲುಗಡೆ ಸೇರಿದಂತೆ ಹಲವು ರೀತಿಯ ಕಿರಿಕಿರಿಗಳಿಗೆ ಎಡೆ ಮಾಡಿಕೊಟ್ಟಿದೆ. ಹಾಗೆಯ ಪ್ರವಾಸಿಗರ ಸುಗಮ ಸಂಚಾರಕ್ಕೆ ಅಡೆತಡೆಯಾಗಿ ಪರಿಣಮಿಸಿದೆ ಎಂದು ಕೆಲ ಪ್ರವಾಸಿಗರು ದೂರುತ್ತಾರೆ.