ಮಳೆ ಕೊರತೆ : ಲಿಂಗನಮಕ್ಕಿಯಲ್ಲಿ 28, ಭದ್ರಾ ಡ್ಯಾಂನಲ್ಲಿ 34 ಅಡಿ ಕಡಿಮೆ ನೀರು ಸಂಗ್ರಹ!

ಮಳೆ ಕೊರತೆ : ಲಿಂಗನಮಕ್ಕಿಯಲ್ಲಿ 28, ಭದ್ರಾ ಡ್ಯಾಂನಲ್ಲಿ 34 ಅಡಿ ಕಡಿಮೆ ನೀರು ಸಂಗ್ರಹ!

ಶಿವಮೊಗ್ಗ, ಜು. 11: ಮಲೆನಾಡಿನಲ್ಲಿ ಮುಂಗಾರು ಮಳೆಯ ಕಣ್ಣಾಮುಚ್ಚಾಲೆ ಮುಂದುವರೆದಿದೆ. ವರ್ಷಧಾರೆಯ ಕೊರತೆಯ ನೇರ ಪರಿಣಾಮ, ಲಿಂಗನಮಕ್ಕಿ ಹಾಗೂ ಭದ್ರಾ ಡ್ಯಾಂಗಳ ನೀರಿನ ಸಂಗ್ರಹದ ಮೇಲೆ ಬೀರಿದೆ!

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ, ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿಯಲ್ಲಿ 28 ಅಡಿ ಹಾಗೂ ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿಯಾದ ಭದ್ರಾ ಡ್ಯಾಂನಲ್ಲಿ 34 ಅಡಿಗಳಷ್ಟು ಕಡಿಮೆ ನೀರು ಸಂಗ್ರಹವಾಗಿದೆ!

ಮಂಗಳವಾರ ಬೆಳಿಗ್ಗೆಯ ಮಾಹಿತಿಯಂತೆ, ಲಿಂಗನಮಕ್ಕಿ ಡ್ಯಾಂ ನೀರಿನ ಮಟ್ಟ 1751.9 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 1779.9 ಅಡಿಯಿತ್ತು. ಪ್ರಸ್ತುತ ಡ್ಯಾಂ ಒಳಹರಿವು 3977 ಕ್ಯೂಸೆಕ್ ಇದ್ದು, 1903 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ಕಳೆದ ಕೆಲ ದಿನಗಳ ಹಿಂದೆ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಬಿದ್ದ ಉತ್ತಮ ಮಳೆಯಿಂದ, ಡ್ಯಾಂ ಒಳಹರಿವಿನಲ್ಲಿ ಏರಿಕೆ ಕಂಡುಬಂದಿತ್ತು. ಪ್ರಸ್ತುತ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ, ಒಳಹರಿವಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.

ಭದ್ರಾ ಡ್ಯಾಂ ನೀರಿನ ಮಟ್ಟ 140.1 (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು 174.6 ಅಡಿ ನೀರು ಸಂಗ್ರಹವಾಗಿತ್ತು. ಡ್ಯಾಂ ಒಳಹರಿವಿನಲ್ಲಿಯೂ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. ಮಂಗಳವಾರ ಬೆಳಿಗ್ಗೆಯ ಮಾಹಿತಿಯಂತೆ, ಡ್ಯಾಂನ ಒಳಹರಿವು 823 ಕ್ಯೂಸೆಕ್ ಗೆ ಕುಸಿತವಾಗಿದೆ. 163 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ವಾರ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಬಿದ್ದ ಭಾರೀ ಮಳೆ ಕಾರಣದಿಂದ ಡ್ಯಾಂ ಒಳಹರಿವಿನಲ್ಲಿ ಏರಿಕೆ ಕಂಡುಬಂದಿತ್ತು.

ತಗ್ಗಿದ ಮಳೆ: ಪ್ರಸ್ತುತ ವರ್ಷದ ಜೂನ್ ತಿಂಗಳ ವೇಳೆ ಮುಂಗಾರು ಮಳೆ ಸಂಪೂರ್ಣ ದುರ್ಬಲವಾಗಿತ್ತು. ಜುಲೈ ತಿಂಗಳ ಮೊದಲ ವಾರದಲ್ಲಿ ಭಾರೀ ಮಳೆಯಾಗುವ ಮೂಲಕ, ಬರದ ಕಾರ್ಮೋಡ ಮರೆಯಾಗುವಂತಾಗಿತ್ತು.

ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಬೀಳುತ್ತಿದ್ದ ಭಾರೀ ವರ್ಷಧಾರೆಯಿಂದ, ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಏರಿಕೆ ಕಂಡುಬಂದಿತ್ತು. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯ ಪ್ರಮಾಣ ಇಳಿಮುಖವಾಗಿದೆ. ಇದರಿಂದ ಡ್ಯಾಂಗಳ ಒಳಹರಿವಿನಲ್ಲಿ ಕುಸಿತ ಕಂಡುಬಂದಿದೆ.

ಬೆಂಗಳೂರಿನ ಕೋರ್ಟ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬಿಜಾಪುರ ಜಿಲ್ಲೆಯ ಆರೋಪಿಯನ್ನು ಬಂಧಿಸಿದ ಶಿವಮೊಗ್ಗ ಪೊಲೀಸರು! Previous post ಬೆಂಗಳೂರಿನ ಕೋರ್ಟ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬಿಜಾಪುರ ಜಿಲ್ಲೆಯ ಆರೋಪಿಯನ್ನು ಬಂಧಿಸಿದ ಶಿವಮೊಗ್ಗ ಪೊಲೀಸರು!
‘ಬೀದಿ ಕಾಮಣ್ಣರ’ ಹಾವಳಿ ನಿಯಂತ್ರಣಕ್ಕೆ ಜಾರಿಗೆ ತಂದಿದ್ದ ‘ಓಬವ್ವ ಪಡೆ’ ಎಲ್ಲೋಯ್ತು? Next post ‘ಬೀದಿ ಕಾಮಣ್ಣರ’ ಹಾವಳಿ ನಿಯಂತ್ರಣಕ್ಕೆ ಅಸ್ತಿತ್ವಕ್ಕೆ ತಂದಿದ್ದ ‘ಓಬವ್ವ ಪಡೆ’ ಎಲ್ಲೋಯ್ತು?