‘ಬೀದಿ ಕಾಮಣ್ಣರ’ ಹಾವಳಿ ನಿಯಂತ್ರಣಕ್ಕೆ ಜಾರಿಗೆ ತಂದಿದ್ದ ‘ಓಬವ್ವ ಪಡೆ’ ಎಲ್ಲೋಯ್ತು?

‘ಬೀದಿ ಕಾಮಣ್ಣರ’ ಹಾವಳಿ ನಿಯಂತ್ರಣಕ್ಕೆ ಅಸ್ತಿತ್ವಕ್ಕೆ ತಂದಿದ್ದ ‘ಓಬವ್ವ ಪಡೆ’ ಎಲ್ಲೋಯ್ತು?

ವರದಿ : ಬಿ. ರೇಣುಕೇಶ್

ಶಿವಮೊಗ್ಗ, ಜು. 12: ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರು, ಮಹಿಳೆಯರಿಗೆ ಸಾರ್ವಜನಿಕ ಸ್ಥಳ – ಸಿಟಿ ಬಸ್ ಗಳಲ್ಲಿ ‘ಬೀದಿ ಕಾಮಣ್ಣ’ (ರೋಡ್ ರೋಮಿಯೋ) ರಿಂದ ಉಂಟಾಗುತ್ತಿದ್ದ ಕಿರಿಕಿರಿ ತಪ್ಪಿಸಲು, ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಜಾರಿಗೆ ತಂದಿದ್ದ, ‘ಓಬವ್ವ ಪಡೆ’ ಮೂಲೆಗುಂಪಾಗಿ ವರ್ಷಗಳೇ ಉರುಳಲಾರಂಭಿಸಿದೆ!

2016 ರಲ್ಲಿ ಅಂದು ಶಿವಮೊಗ್ಗ ಎಸ್ಪಿಯಾಗಿದ್ದ ರವಿ ಡಿ. ಚೆನ್ನಣ್ಣವರ್ ಓಬವ್ವ ಪಡೆ ಅಸ್ತಿತ್ವಕ್ಕೆ ತಂದಿದ್ದರು. ಸದರಿ ಪಡೆಗೆ ಮಹಿಳಾ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ಎರಡು ಪ್ರತ್ಯೇಕ ಗಸ್ತು ಪಡೆ ವಾಹನಗಳನ್ನು ನಿಯೋಜಿಸಲಾಗಿತ್ತು.

ಸದರಿ ಪಡೆಯ ಸಿಬ್ಬಂದಿಗಳು ಮಫ್ತಿಯಲ್ಲಿ ಶಾಲಾ-ಕಾಲೇಜುಗಳು, ಸಾರ್ವಜನಿಕ ಸ್ಥಳಗಳು, ಪಾರ್ಕ್ ಗಳು, ಸಿಟಿ ಬಸ್ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ನಿರಂತರವಾಗಿ ಸಂಚರಿಸುತ್ತಿದ್ದರು.

ಈ ವೇಳೆ ವಿದ್ಯಾರ್ಥಿನಿಯರು – ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ, ನೂರಾರು ರೋಡ್ ರೋಮಿಯೋಗಳನ್ನು ವಶಕ್ಕೆ ಪಡೆದು ತಕ್ಕ ಶಾಸ್ತಿ ಮಾಡಿದ್ದರು. ಇದು  ವಿದ್ಯಾರ್ಥಿನಿಯರು, ಮಹಿಳೆಯರ ಮೆಚ್ಚುಗೆಗೆ ಪಾತ್ರವಾಗಿತ್ತು.

ನಾಗರೀಕರ ಒತ್ತಾಯದ ಮೇರೆಗೆ, ಶಿವಮೊಗ್ಗ ನಗರದ ಮಾದರಿಯಲ್ಲಿ ಭದ್ರಾವತಿ, ಸಾಗರ ಮತ್ತಿತರೆಡೆಯೂ ‘ಓಬವ್ವ ಪಡೆ’ ಅಸ್ತಿತ್ವಕ್ಕೆ ತರಲಾಗಿತ್ತು. ಈ ಪಡೆಯ ಕಾರ್ಯನಿರ್ವಹಣೆಗೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು.

ಹಾಗೆಯೇ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ನಗರ-ಪಟ್ಟಣಗಳಲ್ಲಿಯೂ ‘ಓಬವ್ವ ಪಡೆ’ಯ ಮಾದರಿಯಲ್ಲಿ ಮಹಿಳಾ ಸುರಕ್ಷತಾ ಪಡೆಗಳು ಅಸ್ತಿತ್ವಕ್ಕೆ ಬಂದಿದ್ದವು.

ಜನಮಾನಸದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ‘ಓಬವ್ವ ಪಡೆ’ಯು, ಕಾಲಾಂತರದಲ್ಲಿ ಮೂಲೆಗುಂಪಾಗಿತ್ತು. ಕೆಲ ಎಸ್ಪಿಗಳಿಗೆ ಈ ರೀತಿಯ ಪಡೆಯೊಂದು ಅಸ್ತಿತ್ವದಲ್ಲಿತ್ತು ಎಂಬುವುದರ ಮಾಹಿತಿಯೇ ಇಲ್ಲದಂತ ಸ್ಥಿತಿಗೆ ಬಂದಿತ್ತು!

ಕೇಳಿಬರುತ್ತಿದೆ ಆರೋಪ: ಸಾರ್ವಜನಿಕ ಸ್ಥಳಗಳು, ಸಿಟಿ ಬಸ್ ಸೇರಿದಂತೆ ಹಲವೆಡೆ ಪುಂಡಪೋಕರಿಗಳ ಹಾವಳಿ ಹೆಚ್ಚಾಗುತ್ತಿರುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಇದರಿಂದ ವಿದ್ಯಾರ್ಥಿನಿಯರು, ಮಹಿಳೆಯರು ತೀವ್ರ ಕಿರಿಕಿರಿ ಎದುರಿಸುವಂತಾಗಿದೆ.

‘ಕೆಲ ವಿದ್ಯಾರ್ಥಿನಿಯರು ತಮಗಾಗುತ್ತಿರುವ ತೊಂದರೆ ಕುರಿತಂತೆ ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಪುಂಡರಿಂದ ಏನಾದರೂ ತೊಂದರೆಯಾಗುತ್ತದೆಯೋ ಎಂಬ ಭಯದಲ್ಲಿರುತ್ತಾರೆ. ಮನೆಯಲ್ಲಿ ಹೇಳಿಕೊಂಡರೆ ಎಲ್ಲ ಶಾಲಾ-ಕಾಲೇಜುಗಳಿಗೆ ಹೋಗದಂತೆ ನಿರ್ಬಂಧ ಹಾಕುತ್ತಾರೋ ಎಂಬ ಗೊಂದಲದಲ್ಲಿರುತ್ತಾರೆ. ಇಂತಹ ಕಿಡಿಗೇಡಿಗಳಿಂದ ಅದೆಷ್ಟೊ ಹೆಣ್ಣು ಮಕ್ಕಳ ಜೀವನ ಹಾಳಾಗುತ್ತಿದೆ. ಇಂತವರ ಮಟ್ಟ ಹಾಕಲು ಪೊಲೀಸ್ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ’ ಎಂದು ಶಿವಮೊಗ್ಗದ ಗೃಹಿಣಿ ನಾಗರತ್ನ ಎಂಬುವರು ಅಭಿಪ್ರಾಯಪಡುತ್ತಾರೆ.

ಗಮನಹರಿಸುವರೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್?

*** ಯುವ ಐಪಿಎಸ್ ಅಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಶಿವಮೊಗ್ಗ ಎಸ್ಪಿಯಾಗಿ ಆಗಮಿಸಿದ ನಂತರ, ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಆಮೂಲಾಗ್ರ ಸುಧಾರಣೆ ತಂದಿದ್ದಾರೆ. ಹೊಸ ಬದಲಾವಣೆಗೆ ನಾಂದಿಯಾಡಿದ್ದಾರೆ. ಕ್ರಿಮಿನಲ್ಸ್ ಗಳ ನಿದ್ದೆಗೆಡಿಸುವುದರ ಜೊತೆಗೆ ಜೊತೆಗೆ, ಜನಪರ ಕಾರ್ಯನಿರ್ವಹಣೆ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ.

ಯುವ ಐಪಿಎಸ್ ಅಧಿಕಾರಿ ಜಿ.ಕೆ.ಮಿಥುನ್ ಕುಮಾರ್

ವಿದ್ಯಾರ್ಥಿನಿಯರು, ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಸದ್ಯ ಹೇಳ ಹೆಸರಿಲ್ಲದಂತೆ ಮೂಲೆಗುಂಪಾಗಿರುವ ‘ಓಬವ್ವ ಪಡೆ’ಯನ್ನು ಮತ್ತೆ ಅಸ್ತಿತ್ವಕ್ಕೆ ತರಲಿದ್ದಾರಾ? ಬೀದಿ ಕಾಮಣ್ಣರಿಗೆ ತಕ್ಕ ಶಾಸ್ತಿ ಮಾಡಲಿದ್ದಾರಾ? ವಿದ್ಯಾರ್ಥಿನಿಯರು, ಮಹಿಳೆಯರಲ್ಲಿ ಸುರಕ್ಷತೆಯ ಭಾವ ಮೂಡಿಸಲಿದ್ದಾರಾ? ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.

ಮಳೆ ಕೊರತೆ : ಲಿಂಗನಮಕ್ಕಿಯಲ್ಲಿ 28, ಭದ್ರಾ ಡ್ಯಾಂನಲ್ಲಿ 34 ಅಡಿ ಕಡಿಮೆ ನೀರು ಸಂಗ್ರಹ! Previous post ಮಳೆ ಕೊರತೆ : ಲಿಂಗನಮಕ್ಕಿಯಲ್ಲಿ 28, ಭದ್ರಾ ಡ್ಯಾಂನಲ್ಲಿ 34 ಅಡಿ ಕಡಿಮೆ ನೀರು ಸಂಗ್ರಹ!
ಮಠದ ಸ್ವಾಮೀಜಿ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವ ಅಪರಿಚಿತರ ತಂಡ! Next post ಮಠದ ಸ್ವಾಮೀಜಿ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ..!