ಮಠದ ಸ್ವಾಮೀಜಿ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವ ಅಪರಿಚಿತರ ತಂಡ!

ಮಠದ ಸ್ವಾಮೀಜಿ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ..!

ಶಿವಮೊಗ್ಗ, ಜು. 13: ಹೊನ್ನಾಳ್ಳಿ ತಾಲೂಕಿನ ಸಾಸ್ವೆಹಳ್ಳಿ ಸಮೀಪದ ರಾಂಪುರ ಮಠದ ಸ್ವಾಮೀಜಿ ಎಂದು ಹೇಳಿಕೊಂಡು ಕಾರಿನಲ್ಲಿ ಆಗಮಿಸಿದ ಅಪರಿಚಿತರ ತಂಡವೊಂದು, ನಾಗರೀಕರಿಂದ ಹಣ ವಸೂಲಿ ಮಾಡಿಕೊಂಡು ತೆರಳಿರುವ ಘಟನೆ ಶಿವಮೊಗ್ಗದ ವಿವಿಧೆಡೆ ಇತ್ತೀಚೆಗೆ ನಡೆದಿದೆ.

ನಗರದ ಹೊರವಲಯ ಬಸವನಗಂಗೂರು ಗ್ರಾಮ, ಕೆ.ಹೆಚ್.ಬಿ. ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಬಡಾವಣೆಯ ಕೆಲ ಮನೆಗಳಿಗೆ ಖಾವಿ ಬಟ್ಟೆ ಧರಿಸಿದ್ದ ವ್ಯಕ್ತಿ ಸೇರಿದಂತೆ ಕೆಲ ಸಹಚರರು ಐಷಾರಾಮಿ ಕಾರಿನಲ್ಲಿ ಆಗಮಿಸಿದ್ದಾರೆ. ಎಲ್ಲರೂ ಮಧ್ಯವಯಸ್ಕರಾಗಿದ್ದು, ಮಠದ ಸ್ವಾಮೀಜಿ ಹಾಗೂ ಅವರ ಭಕ್ತರು ಎಂದು ಸಾರ್ವಜನಿಕರಿಗೆ ಪರಿಚಯಿಸಿಕೊಂಡಿದ್ದಾರೆ.

‘ಕಾರಿನಲ್ಲಿ ಆಗಮಿಸಿ ಸ್ವಾಮೀಜಿ ಬಂದಿದ್ದಾರೆಂದು ನೇರವಾಗಿ ಮನೆಯೊಳಗೆ ಬಂದರು. ಮಠದ ಆವರಣದಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ದೇಣಿಗೆ ಸಂಗ್ರಹಿಸಲು ಆಗಮಿಸಿರುವುದಾಗಿ ಹೇಳಿದರು.

5 ಸಾವಿರ ರೂ. ನೀಡುವಂತೆ, ಸಿಮೆಂಟ್ ಮತ್ತೀತರ ವಸ್ತುಗಳನ್ನು ಕೊಡಿಸುವಂತೆ ಒತ್ತಡ ಹಾಕಿದರು. ತಮ್ಮ ಬಳಿ ಅಷ್ಟೊಂದು ಹಣವಿಲ್ಲವೆಂದು ಹೇಳಿ 500 ರೂ. ನೀಡಿ ಕಳುಹಿಸಲಾಯಿತು’ ಎಂದು ಕೆ.ಹೆಚ್.ಬಿ ಕಾಲೋನಿಯ ಮನೆಯೊಂದರ ನಿವಾಸಿಯೋರ್ವರು ಮಾಹಿತಿ ನೀಡಿದ್ದಾರೆ.

ಮಠದವರಲ್ಲ: ಈ ಕುರಿತಂತೆ ರಾಂಪುರ ಮಠದ ಸದ್ಗುರು ಶಿವಯೋಗಿ ಶಿವಕುಮಾರ  ಹಾಲಸ್ವಾಮೀಜಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಯಾರೋ ದುರುದ್ದೇಶದಿಂದ ಮಠದ ಹೆಸರೇಳಿಕೊಂಡು ಹಣ ಸಂಗ್ರಹಿಸುತ್ತಿದ್ದಾರೆ. ಇಂತವರು ಬಂದಾಗ ಯಾವುದೇ ಹಣ, ವಸ್ತುಗಳನ್ನು ಕೊಡಬೇಡಿ. ಇವರ ಬಗ್ಗೆ ಮಠಕ್ಕೆ ಮಾಹಿತಿ ನೀಡುವಂತೆ’  ಸಾರ್ವಜನಿಕರಿಗೆ ಹಾಗೂ ಮಠದ ಭಕ್ತರಿಗೆ ಮನವಿ ಮಾಡಿದ್ದಾರೆ.

‘ಬೀದಿ ಕಾಮಣ್ಣರ’ ಹಾವಳಿ ನಿಯಂತ್ರಣಕ್ಕೆ ಜಾರಿಗೆ ತಂದಿದ್ದ ‘ಓಬವ್ವ ಪಡೆ’ ಎಲ್ಲೋಯ್ತು? Previous post ‘ಬೀದಿ ಕಾಮಣ್ಣರ’ ಹಾವಳಿ ನಿಯಂತ್ರಣಕ್ಕೆ ಅಸ್ತಿತ್ವಕ್ಕೆ ತಂದಿದ್ದ ‘ಓಬವ್ವ ಪಡೆ’ ಎಲ್ಲೋಯ್ತು?
‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಜು. 20 ರೊಳಗೆ ಸಕಲ ಸೌಲಭ್ಯ - ಆ. 11 ರಿಂದ ವಿಮಾನ ಹಾರಾಟ’ : ಸಚಿವ ಎಂ.ಬಿ.ಪಾಟೀಲ್ ರಾಜ್ಯ ಸರ್ಕಾರದಿಂದ ಕಾರ್ಯಾಚರಣೆ – ನಿರ್ವಹಣೆಗೊಳ್ಳಲಿರುವ ಮೊದಲ ಏರ್ ಪೋರ್ಟ್ Next post ‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಜು.20 ರೊಳಗೆ ಸಕಲ ಸೌಲಭ್ಯ – ಆ.11 ರಿಂದ ವಿಮಾನ ಹಾರಾಟ’ : ಸಚಿವ ಎಂ.ಬಿ.ಪಾಟೀಲ್