
ವಿಳಾಸ ಕೇಳುವ ನೆಪದಲ್ಲಿ ಮಾಂಗಲ್ಯ ಸರ ಅಪಹರಣ – ಬೈಕ್ ನಲ್ಲಿ ಆಗಮಿಸಿದ ದುಷ್ಕರ್ಮಿಗಳಿಬ್ಬರಿಂದ ಕೃತ್ಯ!
ಶಿವಮೊಗ್ಗ, ಜು. 14: ಬೈಕ್ ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು, ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೋರ್ವರ ಮಾಂಗಲ್ಯ ಸರ ಅಪಹರಿಸಿ ಪರಾರಿಯಾದ ಘಟನೆ, ಶಿವಮೊಗ್ಗ ನಗರದ ಹೊರವಲಯ ಚಿಕ್ಕಲ್ ಬಡಾವಣೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಚಿಕ್ಕಲ್ ನಿವಾಸಿ ಲತಾ (50) ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿ ಹಿಂಬದಿಯಿಂದ ಆಗಮಿಸಿದ ಸರಗಳ್ಳರು ಮಾಂಗಲ್ಯ ಸರ ಕಿತ್ತುಕೊಂಡಿದ್ದಾರೆ. ಈ ವೇಳೆ ಅರ್ಧ ಸರ ಮಾತ್ರ ಕಳ್ಳರ ಪಾಲಾಗಿದ್ದು, ಉಳಿದ ಸರ ಉಳಿಸಿಕೊಳ್ಳುವಲ್ಲಿ ಲತಾರವರು ಸಫಲರಾಗಿದ್ದಾರೆ.
ಮಹಿಳೆಯು ಮನೆಯ ಸಮೀಪದ ಪಾರ್ಕ್ ವೊಂದರ ಬಳಿ ವಾಯು ವಿಹಾರ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ, ಬೈಕ್ ನಲ್ಲಿ ಆಗಮಿಸಿದ ದುಷ್ಕರ್ಮಿಗಳು ಸ್ಥಳವೊಂದರ ವಿಳಾಸ ಕೇಳುವ ನೆಪದಲ್ಲಿ ಅವರನ್ನು ನಿಲ್ಲಿಸಿದ್ದಾರೆ. ನಂತರ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಒಟ್ಟಾರೆ 50 ಗ್ರಾಂ ತೂಕದ ಮಾಂಗಲ್ಯ ಸರದಲ್ಲಿ ಸುಮಾರು 30 ಗ್ರಾಂ ಸರಗಳ್ಳರ ಪಾಲಾಗಿದೆ. ಇದರ ಮೌಲ್ಯ ಸುಮಾರು 1.50 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿ ಕ್ಯಾಮರಾದಲ್ಲಿ ಸೆರೆ: ಮಾಂಗಲ್ಯ ಸರ ಅಪಹರಣದ ಕೃತ್ಯವು ಸಮೀಪದ ಕಟ್ಟಡವೊಂದರಲ್ಲಿ ಅಳವಡಿಸಿದ್ದ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ಆಧಾರದ ಮೇಲೆ ಪೊಲೀಸರು ಸರಗಳ್ಳರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.