
ಶಿವಮೊಗ್ಗ : ಗಾಂಜಾ ಮಾರಾಟ – ಇಬ್ಬರು ಯುವಕರ ಬಂಧನ
ಶಿವಮೊಗ್ಗ, ಜು. 17: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಇಬ್ಬರನ್ನು ಬಂಧಿಸಿದ ಘಟನೆ ಶಿವಮೊಗ್ಗ ನಗರದ ಹೊರವಲಯ ಸೂಳೇಬೈಲು ಬಳಿಯ ಎಕೆಎಸ್ ಲೇಔಟ್ ಬಳಿ ನಡೆದಿದೆ.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸುರಹೊನ್ನೆಯ ಶಶಾಂಕ್ (22) ಹಾಗೂ ಸಿದ್ದರಹಳ್ಳಿಯ ರಾಜು (21) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಖಚಿತ ವರ್ತಮಾನದ ಮೇರೆಗೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಬಂಧಿತರಿಂದ 24 ಸಾವಿರ ರೂ. ಮೌಲ್ಯದ 760 ಗ್ರಾಂ ತೂಕದ ಗಾಂಜಾ, 400 ನಗದು, 1 ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಡಿವೈಎಸ್ಪಿ ಬಾಲರಾಜ್ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ಮಂಜುನಾಥ್ ಬಿ, ಸಬ್ ಇನ್ಸ್ ಪೆಕ್ಟರ್ ಕುಮಾರ್ ಕೂರಗುಂದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೀರ್ಥಹಳ್ಳಿ : ಶಾಲಾ ಮೈದಾನದಲ್ಲಿ ಇಸ್ಪೀಟ್ ಜೂಜು – 10 ಜನರು ವಶಕ್ಕೆ
ತೀರ್ಥಹಳ್ಳಿ, ಜು. 17: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಘರವಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮೈದಾನದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ, ಜೂಜಿನಲ್ಲಿ ತೊಡಗಿದ್ದ ಆರೋಪದ ಮೇರೆಗೆ 10 ಜನರನ್ನು ವಶಕ್ಕೆ ಪಡೆದ ಘಟನೆ ಭಾನುವಾರ ನಡೆದಿದೆ.

ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರಿಂದ 25,300 ರೂ. ಮತ್ತೀತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಕೊಂಡಿದ್ದಾರೆ.
ಡಿವೈಎಸ್ಪಿ ಗಜಾನನ ವಾಮನ ಸುತಾರ ಮಾರ್ಗದರ್ಶನದಲ್ಲಿ ಸಬ್ ಇನ್ಸ್’ಪೆಕ್ಟರ್ ಗಳಾದ ರಂಗನಾಥ್, ಗಾದಿ ಲಿಂಗಪ್ಪ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ – ಭದ್ರಾವತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ಪಥ ಸಂಚಲನ
ಶಿವಮೊಗ್ಗ/ಭದ್ರಾವತಿ, ಜು. 17: ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ತಿಲಕ್ ನಗರ ಹಾಗೂ ಭದ್ರಾವತಿ ಪಟ್ಟಣದ ನ್ಯೂ ಟೌನ್ ಠಾಣಾ ವ್ಯಾಪ್ತಿಯ ಕೂಲಿ ಬ್ಲಾಕ್ ಶೆಡ್ ಏರಿಯಾದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು.

ಶಿವಮೊಗ್ಗ ಜಯನಗರ ಪೊಲೀಸ್ ಠಾಣೆ ಸಬ್ ಇನ್ಸ್’ಪೆಕ್ಟರ್ ನವೀನ್ ಹಾಗೂ ಭದ್ರಾವತಿ ನ್ಯೂ ಟೌನ್ ಠಾಣೆ ಸಬ್ ಇನ್ಸ್’ಪೆಕ್ಟರ್ ರಮೇಶ್ ಹಾಗೂ ಭಾರತೀರವರ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು. ಠಾಣೆಯ ಇತರೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಪರೇಡ್ ನಲ್ಲಿ ಭಾಗವಹಿಸಿದ್ದರು.
ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಲ್ಲಿ, ನಿಯಮಿತವಾಗಿ ಆಯಾ ಠಾಣೆಯ ಪೊಲೀಸರು ಪಥ ಸಂಚಲನ ನಡೆಸುತ್ತಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಎಸ್ಪಿಯಾಗಿ ಆಗಮಿಸಿದ ನಂತರ ಈ ಹೊಸ ವ್ಯವಸ್ಥೆ ಜಾರಿಗೊಳಿಸಿದ್ದಾರೆ.