ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪ್ರಕರಣ : ಇಬ್ಬರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ

ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ : ಇಬ್ಬರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ

ಶಿವಮೊಗ್ಗ, ಜು. 18: ಅರಣ್ಯ ಭೂಮಿ ಒತ್ತುವರಿ ತಡೆಯಲು ಮುಂದಾದ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಇಬ್ಬರಿಗೆ, 3 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 19 ಸಾವಿರ ರೂ. ದಂಡ ವಿಧಿಸಿ ತೀರ್ಥಹಳ್ಳಿಯ ಹಿರಿಯ ವ್ಯವಹಾರ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ತೀರ್ಪು ನೀಡಿದೆ.

ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಅಲಗೇರಿ ಗ್ರಾಮದ ನಿವಾಸಿಗಳಾದ ಭದ್ರಪ್ಪ (57) ಹಾಗೂ ರಕ್ಷಿತ್ (30) ಶಿಕ್ಷೆಗೆ ಗುರಿಯಾದವರೆಂದು ಗುರುತಿಸಲಾಗಿದೆ.

ದಂಡ ಕಟ್ಟಲು ವಿಫಲವಾದಲ್ಲಿ 1 ವರ್ಷ ಸಾಧಾರಣ ಕಾರಾಗೃಹ ವಾಸದ ಶಿಕ್ಷೆ ಅನುಭವಿಸುವಂತೆ, ನ್ಯಾಯಾಧೀಶರಾದ ಭರತ್ ರವರು ಜು.18 ರಂದು ನೀಡಿದ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರೇಮಲೀಲಾ ಡಿ.ಜೆ. ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನಲೆ: 28-1-2021 ರಂದು ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಅಲಗೇರಿ ಗ್ರಾಮದಲ್ಲಿ ಶಿಕ್ಷೆಗೊಳಗಾದ ಭದ್ರಪ್ಪ ಹಾಗೂ ರಕ್ಷಿತ್ ಅವರು ಅರಣ್ಯ ಜಾಗ ಒತ್ತುವರಿ ಮಾಡುತ್ತಿರುವ ಕುರಿತಂತೆ ಅರಣ್ಯ ಇಲಾಖೆಗೆ ಮಾಹಿತಿ ಲಭಿಸಿತ್ತು.

ಇದರ ಆಧಾರದ ಮೇಲೆ ಸ್ಥಳಕ್ಕೆ ಆಗುಂಬೆ ವಲಯ ಉಪ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಮತ್ತು ಅರಣ್ಯ ರಕ್ಷಕ ಅಭಿಷೇಕ್ ಕಾವಡಿ ತೆರಳಿದ್ದರು. ಅರಣ್ಯ ಒತ್ತುವರಿ ತಡೆಗೆ ಮುಂದಾಗಿದ್ದರು.

ಈ ವೇಳೆ ಭದ್ರಪ್ಪ ಹಾಗೂ ಕಿರಣ್ ಅವರು, ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಕೆಳಕ್ಕೆ ದೂಡಿ ಬೀಳಿಸಿದ್ದಾರೆಂದು ಅರಣ್ಯಾಧಿಕಾರಿ-ಸಿಬ್ಬಂದಿಯು ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದರ ಆಧಾರದ ಮೇಲೆ ಪೊಲೀಸರು ಐಪಿಸಿ ಕಲಂ 341, 504, 332, 353, 34 ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಪಿಎಸ್ಐ ಶಿವಕುಮಾರ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಶಿವಮೊಗ್ಗ – ಭದ್ರಾವತಿಯ ವಿವಿಧೆಡೆ ನ್ಯಾಯಬೆಲೆ ಅಂಗಡಿ ತೆರೆಯಲು ಆಹಾರ ಇಲಾಖೆಯಿಂದ ಅರ್ಜಿ ಆಹ್ವಾನ Previous post ಶಿವಮೊಗ್ಗ – ಭದ್ರಾವತಿಯ ವಿವಿಧೆಡೆ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ
ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ದ ಕಠಿಣ ಕ್ರಮ ಕಾನೂನುಬಾಹಿರ ಕೃತ್ಯಗಳ ಬಗ್ಗೆ ಮಾಹಿತಿ ನೀಡಲಿರುವ ಯುವ ಪಡೆ ಶಿವಮೊಗ್ಗ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಹೇಳಿಕೆ Next post ‘ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ದ ಕಠಿಣ ಕ್ರಮ’ : ಶಿವಮೊಗ್ಗ ಎಸ್ಪಿ ಜಿ.ಕೆ.ಮಿಥುನ್ ಕುಮಾರ್