
16 ವರ್ಷದ ಮಗನಿಗೆ ಬೈಕ್ ಓಡಿಸಲು ಅವಕಾಶ ನೀಡಿದ ತಂದೆಗೆ 25 ಸಾವಿರ ರೂ. ದಂಡ!
ಭದ್ರಾವತಿ, ಜು. 20: ಅಪ್ರಾಪ್ತ ವಯಸ್ಸಿನ ಪುತ್ರನಿಗೆ ಬೈಕ್ ಓಡಿಸಲು ಅವಕಾಶ ನೀಡಿದ ತಂದೆಯೋರ್ವರಿಗೆ ಭದ್ರಾವತಿ ಜೆ.ಎಂ.ಎಫ್.ಸಿ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಭದ್ರಾವತಿ ಪಟ್ಟಣದ ಜನ್ನಾಪುರದ ನಿವಾಸಿ ಶ್ರೀಕಾಂತ್ (45) ಎಂಬುವರೆ, 16 ವರ್ಷ ವಯೋಮಾನದ ಪುತ್ರನಿಗೆ ಬೈಕ್ ಚಾಲನೆಗೆ ಅವಕಾಶ ನೀಡಿ ದಂಡ ಹಾಕಿಸಿಕೊಂಡ ತಂದೆ ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ: 19-7-2023 ರಂದು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಹುತ್ತಾ ಕಾಲೋನಿ ಬಳಿ, ಸಬ್ ಇನ್ಸ್’ಪೆಕ್ಟರ್ ರಮೇಶ್ ಅವರು ವಾಹನ ತಪಾಸಣಾ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಬಾಲಕನೋರ್ವ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದು, ಆತನನ್ನು ನಿಲ್ಲಿಸಿ ವಾಹನಗಳ ದಾಖಲಾತಿ ಪರಿಶೀಲಿಸಿದ್ದರು.
ಆತನ ಬಳಿ ವಾಹನ ಚಾಲನಾ ಪರವಾನಿಗೆಯಿಲ್ಲದಿರುವುದು ಹಾಗೂ ಅಪ್ರಾಪ್ತ ವಯಸ್ಸಿನವನಾಗಿರುವುದು ಬೆಳಕಿಗೆ ಬಂದಿತ್ತು. ಸಂಚಾರಿ ನಿಯಮಗಳಿಗೆ ವಿರುದ್ಧವಾಗಿ, ಅಪ್ರಾಪ್ತ ಪುತ್ರನಿಗೆ ಬೈಕ್ ಚಾಲನೆ ಮಾಡಲು ಅವಕಾಶ ನೀಡಿದ ತಂದೆಯ ವಿರುದ್ದ ನ್ಯೂ ಟೌನ್ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಲಾಗಿತ್ತು. ತದನಂತರ ಪ್ರಕರಣದ ಕುರಿತಂತೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
