
ಕೃಷಿ – ತೋಟಗಾರಿಕೆ ವಿವಿ ; ಕುವೆಂಪು ವಿವಿಯ ಗೌರವ ಡಾಕ್ಟರೇಟ್ ಪುರಸ್ಕೃತರ ಪಟ್ಟಿ ಪ್ರಕಟ
ಶಿವಮೊಗ್ಗ, ಜು. 20: ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಹಾಗೂ ಕುವೆಂಪು ವಿಶ್ವ ವಿದ್ಯಾಲಯಗಳು ತಮ್ಮ ಘಟಿಕೋತ್ಸವದ ಅಂಗವಾಗಿ ಪ್ರಮುಖರಿಗೆ ಗೌರವ ಡಾಕ್ಟರೇಟ್ ಗಳನ್ನು ನೀಡಿ ಸನ್ಮಾನಿಸುತ್ತಿದ್ದು, ಪುರಸ್ಕೃತರ ಹೆಸರುಗಳನ್ನು ಗುರುವಾರ ಪ್ರಕಟಿಸಿವೆ.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯವು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ನಿರ್ಧರಿಸಿದೆ.
ಮತ್ತೊಂದೆಡೆ, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ಸೇರಿದಂತೆ ಮೂವರಿಗೆ ಕುವೆಂಪು ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಅಭಿನಂದಿಸುತ್ತಿದೆ. ಎರಡು ವಿಶ್ವವಿದ್ಯಾಲಯಗಳ ಕುಲಪತಿಗಳು ಗುರುವಾರ ಶಿವಮೊಗ್ಗ ನಗರದಲ್ಲಿ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿದರು. ಗೌರವ ಡಾಕ್ಟರೇಟ್ ಪುರಸ್ಕೃತರ ಬಗ್ಗೆ ಮಾಹಿತಿ ನೀಡಿದರು. ವಿವರ ಈ ಕೆಳಗಿನಂತಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಕೃಷಿ ವಿವಿ ಗೌರವ ಡಾಕ್ಟರೇಟ್
ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ 8 ನೇ ಘಟಿಕೋತ್ಸವದ ಹಿನ್ನೆಲೆಯಲ್ಲಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ ಎಂದು ವಿವಿಯ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್ ಅವರು ತಿಳಿಸಿದ್ದಾರೆ.

ಗುರುವಾರ ಶಿವಮೊಗ್ಗ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಜು. 21 ರಂದು ಸಾಗರ ತಾಲೂಕಿನ ಇರುವಕ್ಕಿಯಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ, ಮಾಜಿ ಸಿಎಂಗೆ ಗೌರವ ಡಾಕ್ಟರೇಟ್ ನೀಡಿ ಅಭಿನಂದಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಶಾಸಕ ಎಂ.ಚಂದ್ರಪ್ಪ ಸೇರಿದಂತೆ ಮೂವರಿಗೆ ಕುವೆಂಪು ವಿವಿ ಗೌರವ ಡಾಕ್ಟರೇಟ್
ಕುವೆಂಪು ವಿಶ್ವವಿದ್ಯಾಲಯದ 33 ನೇ ಘಟಿಕೋತ್ಸವದ ಅಂಗವಾಗಿ ಮೂವರಿಗೆ ಗೌರವ ಡಾಕ್ಟರೇಟ್ ನೀಡಿ ಅಭಿನಂದಿಸಲಾಗುತ್ತಿದೆ ಎಂದು ವಿವಿಯ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಅವರು ತಿಳಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಶಿಕ್ಷಣ ತಜ್ಞರಾದ ಮೂಲತಃ ಉಡುಪಿಯವರಾದ ಸದಾನಂದಶೆಟ್ಟಿ ಅವರಿಗೆ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಮೂಲತಃ ಬಿಜಾಪುರ ಕಲಿಕೇರಿ ಗ್ರಾಮದವರಾದ ಪಂಡಿತ್ ರಾಜಗುರು ಗುರುಸ್ವಾಮಿ ಕಲಿಕೇರಿರವರಿಗೆ
ಹಾಗೂ ಗ್ರಾಮೀಣಾಭಿವೃದ್ದಿ ಕ್ಷೇತ್ರದಲ್ಲಿನ ಸಾಧನೆಗಾಗಿ ಮೂಲತಃ ದಾವಣಗೆರೆ ಜಿಲ್ಲೆಯವರಾದ ಪ್ರಸ್ತುತ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಕ್ಷೇತ್ರದ ಶಾಸಕರು ಹಾಗೂ ಹಲವು ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಎಂ.ಚಂದ್ರಪ್ಪ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ ಎಂದು ಕುಲಪತಿಗಳು ತಿಳಿಸಿದ್ದಾರೆ.