
ಒಂದೇ ದಿನದಲ್ಲಿ ಲಿಂಗನಮಕ್ಕಿಗೆ 5, ಭದ್ರಾ ಡ್ಯಾಂಗೆ 4 ಅಡಿ ನೀರು : ತುಂಗಾ ಡ್ಯಾಂನಿಂದ 57 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ!
ಶಿವಮೊಗ್ಗ, ಜು. 24: ಮಲೆನಾಡಿನಲ್ಲಿ ವರ್ಷಧಾರೆಯ ಆರ್ಭಟ ಮುಂದುವರಿದಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನದಿಗಳು ಮೈದುಂಬಿ ಹರಿಯಲಾರಂಭಿಸಿವೆ. ಇದರಿಂದ ಪ್ರಮುಖ ಜಲಾಶಯಗಳ ನೀರಿನ ಸಂಗ್ರಹದಲ್ಲಿ, ಗಣನೀಯ ಪ್ರಮಾಣದ ಹೆಚ್ಚಳ ಕಂಡುಬರಲಾರಂಭಿಸಿದೆ.
ಲಿಂಗನಮಕ್ಕಿ ಡ್ಯಾಂ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಬೀಳುತ್ತಿರುವ ಭಾರೀ ವರ್ಷಧಾರೆಯಿಂದ, ಡ್ಯಾಂಗೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 5 ಅಡಿ ನೀರು ಸಂಗ್ರಹವಾಗಿದೆ.
ಸೋಮವಾರ ಬೆಳಿಗ್ಗೆಯ ಮಾಹಿತಿಯಂತೆ, ಡ್ಯಾಂಗೆ 73,505 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಪ್ರಸ್ತುತ ಡ್ಯಾಂನ ನೀರಿನ ಮಟ್ಟ 1775.15 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 1797.95 ಅಡಿ ನೀರು ಸಂಗ್ರಹವಾಗಿತ್ತು.
ಭದ್ರಾ ಜಲಾಶಯದ ಒಳಹರಿವಿನಲ್ಲಿಯೂ ಹೆಚ್ಚಳವಾಗಿದ್ದು, ಒಂದೇ ದಿನ ಡ್ಯಾಂನಲ್ಲಿ 4 ಅಡಿ ನೀರು ಸಂಗ್ರಹವಾಗಿದೆ. ಸೋಮವಾರ ಬೆಳಿಗ್ಗೆಯ ಮಾಹಿತಿಯಂತೆ ಡ್ಯಾಂನ ಒಳಹರಿವು 39,349 ಕ್ಯೂಸೆಕ್ ಇದೆ. ಪ್ರಸ್ತುತ ಡ್ಯಾಂನಲ್ಲಿ 149.6 (ಗರಿಷ್ಠ ಮಟ್ಟ : 186) ಅಡಿ ನೀರಿದ್ದು, ಹೊರಹರಿವನ್ನು ಸ್ಥಗಿತಗೊಳಿಸಲಾಗಿದೆ.
ಹೆಚ್ಚಿದ ಹೊರ ಹರಿವು: ತುಂಗಾ ಡ್ಯಾಂ ಒಳಹರಿವಿನಲ್ಲಿಯೂ ನಿರಂತರವಾಗಿ ಏರಿಕೆಯಾಗುತ್ತಿದೆ. ಸೋಮವಾರ ಬೆಳಿಗ್ಗೆ ತುಂಗಾ ಡ್ಯಾಂನ ಒಳಹರಿವು 57,352 ಕ್ಯೂಸೆಕ್ ಇದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ, ಒಳಹರಿವಿನಷ್ಟೆ ನೀರನ್ನು ಹೊಸಪೇಟೆಯ ಟಿ.ಬಿ. ಡ್ಯಾಂಗೆ ಹೊರ ಬಿಡಲಾಗುತ್ತಿದೆ.