
ತುಂಗಾ ಡ್ಯಾಂನಿಂದ 67 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ : ಶಿವಮೊಗ್ಗದಲ್ಲಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ತುಂಗಾ ನದಿ!
ಶಿವಮೊಗ್ಗ, ಜು. 24: ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಮಳೆ ಮುಂದುವರೆದಿರುವುದರಿಂದ, ತುಂಗಾ ಜಲಾಶಯದ ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬರಲಾರಂಭಿಸಿದೆ!
ಸೋಮವಾರ ಮಧ್ಯಾಹ್ನದ ಮಾಹಿತಿ ಅನುಸಾರ, ಡ್ಯಾಂಗೆ 67,275 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಒಳ ಹರಿವಿನಷ್ಟೆ ನೀರನ್ನು ಡ್ಯಾಂನಿಂದ ಹೊರ ಬಿಡಲಾಗುತ್ತಿದೆ.
ಇದರಿಂದ ಶಿವಮೊಗ್ಗ ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು ಮೈದುಂಬಿ ಹರಿಯುತ್ತಿದೆ. ಅಪಾಯದ ಮಟ್ಟ ಸೂಚಿಸುವ ಕೋರ್ಪಳಯ್ಯನ ಛತ್ರದ ಬಳಿಯಿರುವ ಮಂಟಪದ ಮೇಲೆ ನೀರು ಹರಿಯುತ್ತಿರುವುದು ಕಂಡುಬರುತ್ತಿದೆ.
ಪ್ರಸ್ತುತ ನಗರದಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿರುವುದರಿಂದ, ತಗ್ಗು ಪ್ರದೇಶಗಳಲ್ಲಿ ಜಲಾವೃತ ಸಮಸ್ಯೆಯ ಭೀತಿಯಿಲ್ಲವಾಗಿದೆ. ಆದರೆ ತುಂಗಾ ಡ್ಯಾಂನ ಹೊರ ಹರಿವು ಹೆಚ್ಚಾದರೆ, ನದಿ ಪಾತ್ರದ ಕೆಲ ತಗ್ಗು ಪ್ರದೇಶಗಳು ಜಲಾವೃತವಾಗುವ ಸಾಧ್ಯತೆಗಳಿವೆ.
ನದಿಪಾತ್ರದಲ್ಲಿ ಎಚ್ಚರವಹಿಸಲು ಸೂಚನೆ : ಎಇಇ ತಿಪ್ಪನಾಯ್ಕ್

*** ‘ತುಂಗಾ ಜಲಾಶಯದ ಒಳಹರಿವಿನಲ್ಲಿ ನಿಂತರ ಏರಿಕೆ ಕಂಡುಬರುತ್ತಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ, ಸೋಮವಾರ ಮಧ್ಯಾಹ್ನದಿಂದ ಡ್ಯಾಂಗೆ ಹರಿದು ಬರುತ್ತಿರುವ 67,275 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಭಾರೀ ಪ್ರಮಾಣದ ನೀರು ಹೊರ ಹರಿಸುತ್ತಿರುವ ಕಾರಣದಿಂದ, ನಾಗರೀಕರು ನದಿ ಪಾತ್ರಕ್ಕೆ ತೆರಳಬಾರದು. ಜಾನುವಾರುಗಳನ್ನು ಬಿಡಬಾರದು. ಜೊತೆಗೆ ಯಾವುದೇ ಚಟುವಟಿಕೆ ನಡೆಸಬಾರದು. ಸೂಕ್ತ ಮುನ್ನೆಚ್ಚರಿಕೆವಹಿಸಬೇಕು’ ಎಂದು ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ತಿಪ್ಪನಾಯ್ಕ್ ಅವರು ಸೋಮವಾರ ಮನವಿ ಮಾಡಿದ್ದಾರೆ.